

ವಿಜಯಪುರ: ಮಹಾನಗರ ಪಾಲಿಕೆಯ ಮೇಯರ್& ಉಪ ಮೇಯರ್ ಅವಧಿ ಜ. 9ಕ್ಕೆ ಪೂರ್ಣಗೊಳ್ಳಲಿದ್ದು ಇಷ್ಟೊತ್ತಿಗಾಗಲೇ ಪ್ರಾದೇಶಿಕ ಆಯುಕ್ತರಿಂದ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳಬೇಕಿತ್ತು. ಆದರೆ, ಈವರೆಗೆ ಅಧಿಸೂಚನೆ ಹೊರಡಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಕಳೆದ 2024 ಜ. 9ರಂದು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆದಿತ್ತು. ಮೇಯರ್ ಸ್ಥಾನಕ್ಕೆ ಮೆಹೇಜಬಿನ್ ಅಬ್ದುಲ್ ರಜಾಕ್ ಹೊರ್ತಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ದಿನೇಶ ಹಳ್ಳಿ ಆಯ್ಕೆಯಾಗುವ ಮೂಲಕ ಎರಡೂ ಸ್ಥಾನಗಳು ಕಾಂಗ್ರೆಸ್ನ "ಕೈ' ವಶವಾಗಿದ್ದವು. ಹೆಚ್ಚಿನ ಸಂಖ್ಯಾಬಲವಿದ್ದರೂ ಬಿಜೆಪಿ ಅಧಿಕಾರದಿಂದ ವಂಚಿತಗೊಳ್ಳುವ ಮೂಲಕ ತೀವ್ರ ಮುಖಭಂಗ ಅನುಭವಿಸಿತ್ತು. ಇದೀಗ 2025ರ ಜ. 9ಕ್ಕೆ ಮೊದಲ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಎರಡನೇ ಅವಧಿಗೆ ಚುನಾವಣೆ ನಡೆಸಬೇಕಿದೆ. ಆದರೆ, ಈವರೆಗೂ ಅಧಿಸೂಚನೆ ಹೊರಡಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಳಂಬ ನೀತಿಗೆ ಕಾರಣವೇನು? : ಮೇಯರ್& ಉಪಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ಈಗಾಗಲೇ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪಾಲಿಕೆಯಿಂದ ಪತ್ರ ಬರೆಯಲಾಗಿದೆ. ಬಿಜೆಪಿಯ ಸದಸ್ಯರು ಸಹ ಖುದ್ದಾಗಿ ಭೇಟಿ ಮಾಡಿ ಸಕಾಲದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಮೇಯರ್& ಉಪ ಮೇಯರ್ ಚುನಾವಣೆ ನಡೆಸಲು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಅವಧಿ ಮುಗಿಯಲು ಇನ್ನೊಂದೇ ದಿನ ಬಾಕಿ ಇದ್ದರೂ ಈವರೆಗೆ ಅಧಿಸೂಚನೆ ಹೊರಡಿಸಲಾಗಿಲ್ಲ. ಹೀಗಾಗಿ ಚುನಾವಣೆ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತವಾಗುತ್ತಿದೆಯಲ್ಲದೇ, ಇದರ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಡ, ತಂತ್ರಗಾರಿಕೆ ಮತ್ತು ಹುನ್ನಾರವೂ ಎದ್ದು ಕಾಣುತ್ತಿದೆ ಎಂದು ಕೆಲವು ಸದಸ್ಯರು ಅನುಮಾನಿಸುವುದರ ಜೊತೆಗೆ ಆಕ್ಷೇಪವೂ ವ್ಯಕ್ತಪಡಿಸಿದ್ದಾರೆ.
ಸದಸ್ಯ ಬಲ ಹೆಚ್ಚಿಸುವ ಪೈಪೋಟಿ : ಕಳೆದ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಬಿಜೆಪಿ ಈ ಬಾರಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟು ನಿಂತಿದ್ದು, ಸದಸ್ಯ ಬಲ ಹೆಚ್ಚಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದೆ. ಈಗಾಗಲೇ ಒಟ್ಟು 17 ಸದಸ್ಯರನ್ನು ಹೊಂದಿರುವ ಬಿಜೆಪಿ ಇದೀಗ ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ಮತಪಟ್ಟಿಗೆ ಸೇರಿಸುವ ಮೂಲಕ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ರಣತಂತ್ರ ಹೆಣೆದಿದೆ. ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ಹಾಗೂ ಎನ್. ರವಿಕುಮಾರ ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಬಿಜೆಪಿಯ ಪ್ರಯತ್ನ ಕಾಂಗ್ರೆಸ್ನ ನಿದ್ರೆ ಕೆಡಿಸಿದೆ. ಇದೇ ಕಾರಣಕ್ಕೆ ಅಧಿಸೂಚನೆ ಹೊರಡಿಸದಂತೆ ಪ್ರಾದೇಶಿಕ ಆಯುಕ್ತರ ಮೇಲೆ ಒತ್ತಡ ಹೇರಲಾಗಿದೆ ಎಂಬ ಗುಮಾನಿ ಇದೆ.
ಇನ್ನೊಂದೆಡೆ ಕಾಂಗ್ರೆಸ್ ಸಹ ಹೆಚ್ಚುವರಿಯಾಗಿ ನಾಲ್ಕು ಜನ ವಿಧಾನ ಪರಿಷತ್ ಸದಸ್ಯರನ್ನು ಮತದಾರ ಪಟ್ಟಿಗೆ ಸೇರ್ಪಡೆಗೊಳಿಸುವ ಕಸರತ್ತು ನಡೆಸಿರುವ ಮಾತು ಕೇಳಿ ಬಂದಿದೆ. ಬೆಳಗಾವಿ, ಕಲಬುರಗಿ, ರಾಯಚೂರು ಸೇರಿದಂತೆ ಒಟ್ಟು ನಾಲ್ವರನ್ನು ವಿಜಯಪುರ ನಗರದ ಮತದಾರರನ್ನಾಗಿಸುವ ತಂತ್ರ ನಡೆದಿದ್ದು, ಸಾಕಲಕ್ಕೆ ಫಲ ಸಿಗದ ಹಿನ್ನೆಲೆ ಅಧಿಸೂಚನೆಗೆ ತಡೆಯೊಡ್ಡಿರುವ ಮಾತು ಕೇಳಿ ಬರುತ್ತಿದೆ.
ಏನಿದು ಲೆಕ್ಕಾಚಾರ? : ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ& 17, ಕಾಂಗ್ರೆಸ್& 10, ಎಐಎಂಐಎಂ& 2, ಜೆಡಿಎಸ್& 1 ಹಾಗೂ ಪಕ್ಷೇತರ& 5 ಸದಸ್ಯರಿದ್ದರು. ಬಹುಮತ ಸಾಬೀತಿಗೆ 21 ಸದಸ್ಯ ಬಲದ ಅವಶ್ಯಕತೆ ಇದ್ದು, ಬಿಜೆಪಿಯ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಸೇರಿದರೆ ಬಿಜೆಪಿ ಸಂಖ್ಯಾಬಲ 19 ಆಗಲಿದೆ. ಬಾಕಿ ಇರುವ ಎರಡು ಸ್ಥಾನಗಳಿಗೆ ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ಹಾಗೂ ಎನ್. ರವಿಕುಮಾರ ಅವರನ್ನು ವಿಜಯಪುರ ನಗರದ ಮತದಾರರನ್ನಾಗಿಸುವ ಮೂಲಕ ಬಹುಮತ ಸಾಬೀತುಪಡಿಸಲು ಬಿಜೆಪಿ ಸಜ್ಜಾಗಿರುವ ಚರ್ಚೆ ಜೋರಾಗಿದೆ.
ಕಾಂಗ್ರೆಸ್ಗೆ 10 ಸದಸ್ಯ ಬಲವಿದ್ದು, ಬಹುಮತ ಸಾಬೀತುಪಡಿಸಲು ಇತರೆ ಪಕ್ಷಗಳ ನೆರವು ಅನಿವಾರ್ಯ. ಎಐಎಂಐಎಂ& 2, ಜೆಡಿಎಸ್& 1 ಹಾಗೂ ಪಕ್ಷೇತರ& 5 ಸದಸ್ಯರಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವ ಕಾರಣಕ್ಕೆ ಜೆಡಿಎಸ್ ಸದಸ್ಯ ಬಿಜೆಪಿಗೆ ಬೆಂಬಲ ಸೂಚಿಸುವುದು ಪಕ್ಕಾ ಎನ್ನಲಾಗಿದೆ. ಹೀಗಾಗಿ ಇನ್ನುಳಿದ ಎಐಎಂಐಎಂ ಮತ್ತು ಪಕ್ಷೇತರ ಅಭ್ಯರ್ಥಿಗಳನ್ನು ಪರಿಗಣಿಸಿದರೂ ಕಾಂಗ್ರೆಸ್ನ ಸಂಖ್ಯಾಬಲ 17 ಆಗಲಿದೆ. ಜೊತೆಗೆ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ನಾಗಠಾಣ ಶಾಸಕ ವಿಠಲ ಕಟಕಧೊಂಡ ಹಾಗೂ ವಿಪ ಸದಸ್ಯ ಸುನೀಲಗೌಡ ಪಾಟೀಲರ ಮತ ಪರಿಗಣಿಸಿದರೂ ಬಹುಮತ ಸಾಬೀತಿಗೆ ಇನ್ನೂ ಒಂದು ಮತ ಬೇಕು. ಇತ್ತೀಚೆಗಷ್ಟೇ ಪ್ರಕಾಶ ರಾಠೋಡ ಅವರ ಅಧಿಕಾರವಧಿ ಮುಕ್ತಾಯವಾಗಿದೆ. ಹೀಗಾಗಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯುವುದು ಪಕ್ಕಾ ಎಂಬ ಲೆಕ್ಕಾಚಾರವೇ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದ್ದು, ತಾನೂ ಸಹ ಇತರೆ ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಹುನ್ನಾರ ನಡೆಸಿದ್ದು, ಅದೇ ಕಾರಣಕ್ಕೆ ಅಧಿಸೂಚನೆ ಪ್ರಕಟಗೊಳ್ಳದಂತೆ ತಂತ್ರಗಾರಿಕೆ ಹೆಣೆದಿರುವ ಮಾತು ಕೇಳಿ ಬರುತ್ತಿದೆ.ಇನ್ನು ಹಾಲಿ ಮೇಯರ್ ಮತ್ತು ಉಪ ಮೇಯರ್ ಹಂಗಾಮಿಯಾಗಿ ಮುಂದುವರಿಯುವ ಹುನ್ನಾರ ನಡೆಸಿದ್ದು, ಈ ತಿಕ್ಕಾಟದ ಲಾಭ ಪಡೆಯಲು ಹವಣಿಸುತ್ತಿರುವುದು ಕಂಡು ಬಂದಿದೆ.
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿದ್ದರಿಂದ ಮತ್ತೊಮ್ಮೆ ಪಟ್ಟಿ ಸಿದ್ದಪಡಿಸಿ ಕಳುಹಿಸಲಾಗಿದೆ. ಶ್ರೀದಲ್ಲಿಯೇ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. > ವಿಜಯಕುಮಾರ ಮೆಕ್ಕಳಕಿ, ಆಯುಕ್ತರು ಮಹಾನಗರ ಪಾಲಿಕೆ