ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್ ಸಮಾವೇಶ

h30-Congress 2
Published on

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ತೊಡೆತಟ್ಟಿ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿಗೆ ತಡೆಯೊಡ್ಡಲು ಕೈ ನಾಯಕರು ರಣತಂತ್ರ ರೂಪಿಸಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಸಮಾವೇಶ ಮಾಡಿ ಯಶ ಕಂಡಿರುವ ಕೈ ನಾಯಕರು, ಹುಬ್ಬಳ್ಳಿಯ ಗಿರಣಿಚಾಳ ಮೈದಾನದಲ್ಲಿ ಮೇ 1ರಂದು ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಹಾಗೂ ಸಂವಿಧಾನ ರಕ್ಷಣೆ ಸಮಾವೇಶ ಮಾಡುವ ಮೂಲಕ ಜನರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ.

ಸಮಾವೇಶಕ್ಕಾಗಿ ಗಿರಣಿಚಾಳದ ಮೈದಾನದಲ್ಲಿ ದೊಡ್ಡ ವೇದಿಕೆ ನಿರ್ಮಿಸಿದ್ದು, 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಅಂದಾಜಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬಹಳಷ್ಟು ನಾಯಕರು ಭಾಗವಹಿಸುವರು.

ನಾಲ್ಕೂ ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸುವ ಹಿನ್ನೆಲೆಯಲ್ಲಿ ಊಟ ಹಾಗೂ ಕುಡಿಯವ ನೀರಿನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ಸ್ಥಳ ನಿಗದಿಪಡಿಸಲಾಗಿದೆ. ಪೊಲೀಸ್ ಇಲಾಖೆಯಿಂದಲೂ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ವಾಹನ ತೆರಳುವ ಮಾರ್ಗ ಮತ್ತು ವೇದಿಕೆ ಮುಂಭಾಗದಲ್ಲಿ ಬರುವ ವಾಹನಗಳನ್ನು ನಿರ್ವಹಿಸಲು ಹಾಗೂ ನಿಗಾ ವಹಿಸಲು ಪೊಲೀಸರನ್ನು ನಿಯೋಜಿಸಲಾಗಿದೆ.

ಪರಿಶೀಲನೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ ಮಯೂರ ಜಯಕುಮಾರ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಗಿರಣಿಚಾಳ ಮೈದಾನದಲ್ಲಿ ನಡೆಯಲಿರುವ ಸಮಾವೇಶದ ವೇದಿಕೆಯನ್ನು ಬುಧವಾರ ಪರಿಶೀಲಿಸಿದರು. ಅಲ್ತಾಫ್ ಹುಸೇನ್ , ಸತೀಶ ಮೆಹರವಾಡೆ, ಸದಾನಂದ ಡಂಗನವರ ಇತರರು ಇದ್ದರು.

ಬೃಹತ್ ಪ್ರತಿಭಟನಾ ಸಮಾವೇಶ: ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಪಾಲಿಗೆ ಹೊರೆಯಾಗುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೇ 1ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಏರ್ಪಡಿಸಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ರಾಜ್ಯಸಭೆ ಸದಸ್ಯ ರಣದೀಪಸಿಂಗ್ ಸುರ್ಜೇವಾಲ, ಸಚಿವರು ಹಾಗೂ ಶಾಸಕರು ಭಾಗವಹಿಸುವರು. ನಿರೀಕ್ಷೆಗೂ ಮೀರಿ ಜನರು ಸೇರುವ ವಿಶ್ವಾಸವಿದೆ ಎಂದರು. ಕೇಂದ್ರ ಸರ್ಕಾರ ಹೆಚ್ಚಿಸಿರುವ ಇಂಧನ ಮತ್ತು ಅನಿಲ ದರ ಜನರನ್ನು ಕಂಗೆಡಿಸಿವೆ. ಇದು ಗೊತ್ತಿದ್ದರೂ ಬಿಜೆಪಿಯವರು ರಾಜ್ಯದಲ್ಲಿ ಜನರ ಕಣ್ಣಿಗೆ ಮಣ್ಣೆರಚಲು ಜನಾಕ್ರೋಶಯಾತ್ರೆ ಮಾಡುತ್ತಿದ್ದಾರೆ. ಇದರ ಹಿಂದಿನ ಸತ್ಯ ಏನೆಂಬುದನ್ನು ನಾವು ಜನರ ಮುಂದೆ ಬೆತ್ತಲೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಕಾಂಗ್ರೆಸ್ ವತಿಯಿಂದ ಸಮಾವೇಶ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net