ಶಾಸಕ ಸುರೇಶ್‌ಗೌಡ ವಿರುದ್ಧ ದೂರು: ಕಾನೂನು ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಒತ್ತಾಯ

Dooru)
Published on

ಮಂಡ್ಯ: ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಸಂಘರ್ಷಕ್ಕೆ ಕುಮ್ಮಕ್ಕು ನೀಡುವುದರ ಜತೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಶಾಸಕ ಸುರೇಶ್‌ಗೌಡ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರಿಗೆ ದೂರು ನೀಡಿದೆ.

ಚುನಾವಣೆ ಘೋಷಣೆಯಾದ ನಂತರ ಸುರೇಶ್‌ಗೌಡ ಅವರು ‘ನಾಗಮಂಗಲದ ಅಭಿವೃದ್ಧಿಗಾಗಿ ಮತ್ತೊಮ್ಮೆ ಸುರೇಶ್‌ಗೌಡ’ ಎಂಬ ತಲೆಬರಹದ ಕರಪತ್ರದ ಮೂಲಕ ಜಾತಿಗಳ ನಡುವೆ ಸಂಘರ್ಷಕ್ಕೆ ಕುಮ್ಮಕ್ಕು ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷರೂ ಆದ ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದ್ದಾರೆ. ಜಾತಿ ನಿಂದನೆ ಕಾಯ್ದೆ ರದ್ದು ಮಾಡಬೇಕೆಂದು ಸದನದಲ್ಲಿ ಮಾತನಾಡಿದ್ದಾರೆ. ಜತೆಗೆ ದಲಿತ ಹೋರಾಟಗಾರರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎನ್ನುವ ಸುಳ್ಳುಗಳಿಂದ ಕೂಡಿರುವ ಕರಪತ್ರವನ್ನು ಹಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಚಲುವರಾಯಸ್ವಾಮಿ ಅವರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ ಎಂಬಿತ್ಯಾದಿ ಸುಳ್ಳುಗಳಿಂದ ಅಪಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ತಾಲೂಕು ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ನಾಗಮಂಗಲ ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ದಲಿತ ಸಮುದಾಯ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ರಾಜಕೀಯವಾಗಿ ಪರಸ್ಪರ ಒಳಗೊಂಡು ಮುನ್ನಡೆಯುತ್ತಿವೆ. ಆದರೆ ಸಮುದಾಯಗಳ ನಡುವೆ ಒಡಕು ತಂದು ಜಾತಿ ಸಂಘರ್ಷದ ವಾತಾವರಣ ನಿರ್ಮಿಸಲು ಸುರೇಶ್‌ಗೌಡ ಷಡ್ಯಂತ್ರ ನಡೆಸಿದ್ದಾರೆ. ಚಲುವರಾಯಸ್ವಾಮಿ ಅವರ ವಿರುದ್ಧ ದಲಿತ ಸಮುದಾಯವನ್ನು ಪ್ರಚೋದಿಸುವ ಹುನ್ನಾರ ನಡೆಸಿದ್ದಾರೆ. ಮಾತ್ರವಲ್ಲದೆ ವ್ಯಕ್ತಿಗತವಾಗಿ ನಿಂದಿಸಿರುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ಸುರೇಶ್‌ಗೌಡ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಮುಖಂಡರಾದ ನಾಗಭೂಷಣ್, ವಿಜಯ್‌ಕುಮಾರ್, ಪ್ರಸನ್ನ, ಚಂದ್ರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net