ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಕೈ ದೂರು?

Siddaramaia 15 Feb 20
Published on

ಬೆಂಗಳೂರು: ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಎರಡು ದಿನಗಳಿಂದ ಸರ್ಕಾರದ ವಿರುದ್ಧ ವಿಧಾನ ಮಂಡಲದೊಳಗೆ ಹೋರಾಟ ನಡೆಸಿರುವ ಕಾಂಗ್ರೆಸ್, ಇದೀಗ ಈ ವಿಚಾರವನ್ನು ರಾಜ್ಯಪಾಲರ ಬಳಿಗೆ ಕೊಂಡೊಯ್ಯಲು ನಿರ್ಧರಿಸಿದೆ.

ಸ್ಪೀಕರ್ ನಮಗೆ ನ್ಯಾಯ ಕೊಡುತ್ತಿಲ್ಲ, ಹೀಗಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಬುಧವಾರ ಬೆಳಗ್ಗೆ 10.45ಕ್ಕೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದೊರೆಸ್ವಾಮಿ ಜೈಲಿನಿಂದ ಬಿಡುಗಡೆಯಾಗಿರೋ ದಾಖಲೆಗಳಿವೆ. ನಾನು ಅಧಿಕಾರದಲ್ಲಿದ್ದಾಗಲೂ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಾರೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲೂ ಒಂದು ವರ್ಷ ಜೈಲಿಗೆ ಹೋಗಿದ್ದಾರೆ.

ಅವರಿಗೆ ಕೈದಿ ನಂಬರ್ 7743 ಸಂಖ್ಯೆ ಕೂಡ ನೀಡಲಾಗಿದೆ. ಮೈಸೂರಿನ ಸೆಂಟ್ರಲ್ ಜೈಲಿನಲ್ಲಿದ್ದರು. ಅವರಿಗೆ ಆಗ ಕೇವಲ 25 ವರ್ಷ ವಯಸ್ಸಾಗಿತ್ತು. ಇಂಥವರನ್ನು ಯತ್ನಾಳ್ ಪಾಕ್ ಏಜೆಂಟ್ ಎಂದು ಕರೆದಿದ್ದಾರೆ ಎಂದು ಟೀಕಿಸಿದರು. ಸುಳ್ಳು ಹೇಳಿ ಬಿಜೆಪಿಯವರು ದಾರಿ ತಪ್ಪಿಸಿದ್ದಾರೆ, ಇಂತವರ ಜತೆ ನಾವು ವಿಧಾನಸಭೆಯಲ್ಲಿ ಹೇಗೆ ಕುಳಿತುಕೊಳ್ಳುವುದು ಎಂದ ಅವರು, ಯತ್ನಾಳ್ ಚರ್ಚೆಗೆ ಅವಕಾಶ ನೀಡದ ಹೊರತು ಸಂವಿಧಾನ ಕುರಿತ ಚರ್ಚೆಯಲ್ಲಿ ನಾವು ಭಾಗವಹಿಸಲ್ಲ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಾರದ ಹಿಂದೆಯೇ ಕಲಾಪ ನಡೆಯಲು ಬಿಡಲ್ಲ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಈ ರೀತಿ ಹೇಳುವುದು ಸಂವಿಧಾನ ವಿರೋಧಿಯಲ್ಲವೇ? ಉಲ್ಲಂಘನೆಯಲ್ಲವೇ? ಮೊದಲೇ ನಿರ್ಧರಿಸಿಕೊಂಡು ಬಂದು ಈಗ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರಷ್ಟೇ. | ಮಾಧುಸ್ವಾಮಿ ಕಾನೂನು ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net