ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು ; ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಭವಿಷ್ಯ

11 klr MLA
Published on

ಕೋಲಾರ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು ಎಂದು ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಕೇಂದ್ರ ಮಾಜಿ ಸಚಿವ, ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಯಾವಾಗಲು ನಂಬರ್ 1 ಸ್ಥಾನದಲ್ಲಿ ಇರುತ್ತಿತ್ತು. ಆದರೆ ಪಕ್ಷದಲ್ಲಿನ ವ್ಯತ್ಯಾಸಗಳಿಂದಾಗಿ ನೆಲಕಚ್ಚುವಂತಾಗಿದೆ ಎಂದರು. ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್ಸಿಗರಿಗಿಂತ ವಲಸೆ ಬಂದವರ ದರ್ಬಾರ್ ಹೆಚ್ಚಾಗುತ್ತಿದೆ, ನಾನೂ ಮೂಲ ಕಾಂಗ್ರೆಸ್ಸಿಗ, ನಮ್ಮ ತಾತ, ತಂದೆ ಸಹ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಆದರೆ ಈಗ ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ಇಲ್ಲದಂತಾಗಿದೆ ಎಂದರು.

ಪಕ್ಷ ಅಧಿಕಾರಕ್ಕೆ ಬರುವ ಮುನ್ನವೇ ಸಿಎಂ ಗಾದಿಗಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆದಿರುವುದು ಹಾಸ್ಯಾಸ್ಪದ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಇಳಿದಿದೆ. ಇಲ್ಲೂ ಪಕ್ಷಕ್ಕೆ ಅಧಿಕಾರ ಸಿಗುವುದು ಅನುವಾನ ಎಂದರು.

ನಾನು ಯಾವುದೇ ಪಕ್ಷದಲ್ಲಿ ಇರಲಿ, ಆ ಪಕ್ಷ ನಂ.1 ಸ್ಥಾನದಲ್ಲಿರುತ್ತೆ, ಆದರೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಆಗಿರುವ ಬದಲಾವಣೆ ಗಮನಿಸಿದರೆ ಮುಂದೆ ಈ ಪಕ್ಷಕ್ಕೆ ಭವಿಷ್ಯ ಇಲ್ಲವೆಂಬ ಅನುಮಾನ ದಟ್ಟವಾಗಿದೆ, ಶನಿವಾರ ನನ್ನ ಬೆಂಬಲಿಗರ ಸಭೆ ಕರೆದಿದ್ದು, ಎಲ್ಲರ ಅಭಿಪ್ರಾಯ ಪಡೆದು ಜೆಡಿಎಸ್ ಸೇರುವ ಅಂತಿಮ ನಿರ್ಧಾರ ಪ್ರಕಟಿಸುವೆ ಎಂದರು.

ದೇವೇಗೌಡರು ದೇಶದ ಅತ್ಯಂತ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿ. ನಮ್ಮ ನಾಡಿನಿಂದ ಸಂಸತ್ ಪ್ರವೇಶಿಸಿ ಪಿಎಂ ಆಗಿದ್ದರು, ಇವರ ಮಾರ್ಗದರ್ಶನದಲ್ಲಿ ನನ್ನ ಮುಂದಿನ ರಾಜಕಾರಣ ಸಾಗಲಿದೆ ಎಂದು ಜೆಡಿಎಸ್ ಸೇರುವ ಬಗ್ಗೆ ಸುಳಿವು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net