ರಾಜ್ಯದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಅಲೆ: ಲೋಕಸಭಾ ಕ್ಷೇತ್ರದ ‘ಕೈ’ ಅಭ್ಯರ್ಥಿ ಸ್ಟಾರ್ ಚಂದ್ರು ಹೇಳಿಕೆ

Congress candidate Star Chandru campaign Mandya
Published on

ಶ್ರೀರಂಗಪಟ್ಟಣ: ಬಡವರಿಗೆ ಬದುಕು ಕಟ್ಟಿಕೊಟ್ಟ ಪಕ್ಷ ಕಾಂಗ್ರೆಸ್. ಮಾತ್ರವಲ್ಲದೆ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. ಗ್ಯಾರಂಟಿ ಯೋಜನೆಗಳಿಗೆ ರಾಜ್ಯದೆಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ ಅಸ್ತಿತ್ವಕ್ಕೆ ಬಂದಂತೆ ಕೇಂದ್ರದಲ್ಲೂ ಗ್ಯಾರಂಟಿ ಸರ್ಕಾರ ರಚನೆಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರೊಂದಿಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ದೇಶದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾಂಗ್ರೆಸ್ ಸರ್ಕಾರ ಹಲವಾರು ಕಾರ್ಯಕ್ರಮ ರೂಪಿಸಿದೆ. ಈಗಾಗಲೇ ರಾಜ್ಯದ ಜನತೆಯ ಮನೆ ಬಾಗಿಲಿಗೆ ಗೃಹಲಕ್ಷ್ಮೀ ಕಾಲಿಟ್ಟಿದ್ದು, ಮುಂದೆ ಮಹಾಲಕ್ಷ್ಮೀ ಕೂಡ ಬರಲಿದ್ದಾಳೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಅಲೆ ಜೋರಾಗಿದೆ. ಇದರ ಮುಂದೆ ಯಾವ ಅಲೆಯೂ ಇಲ್ಲ. ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳು ಜನರ ವಿಶ್ವಾಸ, ನಂಬಿಕೆಯನ್ನು ಹೆಚ್ಚಿಸಿದೆ. ಈ ಚುನಾವಣೆಯಲ್ಲಿ ಅವುಗಳೆಲ್ಲಾ ನನಗೆ ವರದಾನವಾಗಲಿದೆ. ಕೃಷಿಕರ ನಂತರ ಕಾರ್ಮಿಕ ವರ್ಗ ದೇಶದ ಅರ್ಥವ್ಯವಸ್ಥೆಗೆ ಅಡಿಪಾಯ. ಶ್ರಮಿಕ ವರ್ಗದ ಹಕ್ಕುಗಳನ್ನು ಮರಳಿಸಿ ಅವರ ಭವಿಷ್ಯ ರೂಪಿಸಬೇಕಿದೆ. ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವದ ಉಳುವಿಗಾಗಿ ಈ ಜಿಲ್ಲೆಯ ಸ್ವಾಭಿಮಾನದ ಅಸ್ತಿತ್ವಕ್ಕಾಗಿ ಮತದಾರರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಜನಶಕ್ತಿ ನೀಡಬೇಕೆಂದು ಮನವಿ ಮಾಡಿದ ಅವರು, ಹೋದ ಕಡೆಯಲೆಲ್ಲ ಜನರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮಹಿಳೆಯರು, ವೃದ್ಧರು, ಯುವಕರು ಕಾಂಗ್ರೆಸ್‌ನತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ. ನೂರಕ್ಕೆ ನೂರು ಗೆಲುವು ನಿಮ್ಮದೆ ಎಂದು ಹೇಳುತ್ತಿರುವುದನ್ನು ಕೇಳಿದರೆ ನನ್ನ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕೊಟ್ಟ ಮಾತಿನಂತೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಮತ್ತಷ್ಟು ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್, ಇದೀಗ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಮತದಾರರು ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳಬೇಕು. ಮಹಿಳೆಯರಿಗೆ ರಾಜ್ಯ ಸರ್ಕಾರ 2000 ರೂ ನೀಡುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ 2 ಸಾವಿರ ರೂ ಜತೆಗೆ ವರ್ಷಕ್ಕೆ 1 ಲಕ್ಷ ರೂ ನೀಡಲಾಗುವುದು. ಈ ಮೂಲಕ ಮಹಿಳೆಯರಿಗೆ ತಿಂಗಳಿಗೆ 10,500 ರೂ ಸಿಗಲಿದೆ. ಇದು ಕುಟುಂಬ ನಿರ್ವಹಣೆಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಇದಲ್ಲದೆ ರೈತರಿಗೆ ಸಾಲಮನ್ನಾ, ಕನಿಷ್ಟ ಬೆಂಬಲ ಬೆಲೆ, ನರೇಗಾ ಕೂಲಿಯನ್ನು 400 ರೂಗೆ ಹೆಚ್ಚಳ ಮಾಡುವುದು ಸೇರಿದಂತೆ ಹಲವು ಘೋಷಣೆಗಳನ್ನು ಕಾಂಗ್ರೆಸ್ ಮಾಡಿದೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಜಿಲ್ಲೆಯ ಅಭಿವೃದ್ಧಿಗೆ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net