ಸೋಲಿನ ಕುರಿತು ಶಿಕ್ಷಕರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ: ದಕ್ಷಿಣ ಶಿಕ್ಷಕರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹೇಳಿಕೆ

Congress candidate Maritibbe Gowda press conference Mandya
Published on

ಮಂಡ್ಯ: ದಕ್ಷಿಣ ಶಿಕ್ಷಕರ ಚುನಾವಣೆಯ ನನ್ನ ಸೋಲು ಶಿಕ್ಷಕರ ಸೋಲಾಗಿದೆ. ಈ ಬಗ್ಗೆ ಶಿಕ್ಷಕರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹೇಳಿದರು.

ಕಾಂಗ್ರೆಸ್ ನಾಯಕರು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ಸ್ಪರ್ಧೆಗೆ ಅವಕಾಶ ನೀಡಿದರು. ಆದರೆ ಗೆಲುವು ಸಾಧಿಸಲು ಆಗಲಿಲ್ಲ. ಇದು ನನಗೆ ಮಹತ್ವದ ಚುನಾವಣೆಯಾಗಿತ್ತು. ನಾಲ್ಕು ಬಾರಿ ನನ್ನನ್ನು ಶಿಕ್ಷಕರು ಆಯ್ಕೆ ಮಾಡಿ ವಿಧಾನ ಪರಿಷತ್‌ಗೆ ಕಳುಹಿಸಿದ್ದರು. ಎಲ್ಲ ಸಂದರ್ಭದಲ್ಲೂ ನಾನು ವಿರೋಧ ಪಕ್ಷದಲ್ಲಿದ್ದೆ. ಆದರೆ ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಈ ಪಕ್ಷದಿಂದ ಸ್ಪರ್ಧೆ ಮಾಡಿ ತಮ್ಮನ್ನು ಬೆಂಬಲಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿದ್ದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಅವಕಾಶ ಈ ಬಾರಿ ಸಿಕ್ಕಿತು. ಸೋಲು ಗೆಲುವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಹಜ. ಆದರೆ ಆಡಳಿತ ಪಕ್ಷದಲ್ಲಿ ಇರುವಾಗ ಸೋಲಾಗಿದೆ. ನಾನು ಶಿಕ್ಷಕರ ಪರ ಕೆಲಸ ಮಾಡಿದ್ದೇನೆ. ಶಿಕ್ಷಕರಿಗೆ ಅವಮಾನ ಮಾಡುವ ಕೆಲಸ ಮಾಡಿಲ್ಲ. ಎಲ್ಲ ಸಮುದಾಯ ಮತ್ತು ವೃಂದದ ಹಿತ ಕಾಯುವ ಕೆಲಸ ಮಾಡಿದ್ದೇನೆ. ಇನ್ನು ಈ ಬಾರಿಯ ಚುನಾವಣೆ ಕಳಂಕ ತಂದಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಅದರ ಬಗ್ಗೆಯೂ ಶಿಕ್ಷಕ ಸಮುದಾಯ ಯೋಚಿಸಲಿ. ಮುಂದಿನ ದಿನದಲ್ಲಿಯೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವುದರ ಜತೆಗೆ ನಾಲ್ಕು ಜಿಲ್ಲೆಯಲ್ಲಿಯೂ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಸೆನೆಟ್ ಮಾಜಿ ಸದಸ್ಯ ಜಯರಾಮು ಕೀಲಾರ, ನಿವೃತ್ತ ಪ್ರಾಂಶುಪಾಲ ಶಂಕರೇಗೌಡ, ನಿವೃತ್ತ ಪ್ರಾಧ್ಯಾಪಕ ಗುರುಮೂರ್ತಿ, ನಿವೃತ್ತ ಮುಖ್ಯಶಿಕ್ಷಕ ಶಿವರುದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net