

ಮೈಸೂರು: ಸಂಸದ ಪ್ರತಾಪ್ ಸಿಂಹ ನನ್ನ ಸ್ನೇಹಿತ. ನನ್ನ ಹಾಗೂ ಅವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆಯೇ ಹೊರತು ಅವರೊಂದಿಗೆ ವೈಯಕ್ತಿಕ ಧ್ವೇಷ ಇಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಹೊರಗಡೆ ಬಂದರೆ ಜತೆಗೆ ಕೂತು ಕಾಫಿ ಕುಡಿಯುತ್ತೇವೆ, ಫೋನಿನಲ್ಲಿ ಮಾತನಾಡುತ್ತೇವೆ. ಈಗ ಕರೆ ಮಾಡಿದರೂ ಅವರೊಂದಿಗೆ ಮಾತನಾಡುತ್ತೇನೆ. ಪ್ರತಾಪ್ ಸಿಂಹ ರಾಜಕೀಯವಾಗಿ ನನ್ನನ್ನು ಟೀಕಿಸುತ್ತಾರೆ ಅಷ್ಟೆ. ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ತಪ್ಪಿಸಲಾಯಿತು. ಯಾರು ಟಿಕೆಟ್ ತಪ್ಪಿಸಿದರು ಎಂಬುದನ್ನು ಬಿಜೆಪಿ ವರಿಷ್ಠರು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನು ಅಲ್ಲ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಾನು ಒಕ್ಕಲಿಗ ಅಲ್ಲ ಎಂಬುದನ್ನು ಅವರು ಸಾಬೀತು ಪಡಿಸಲಿ. ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಸಹ ಹೇಳಿದ್ದಾರೆ. ಆದಷ್ಟು ಬೇಗ ಅವರು ನನ್ನನ್ನು ಜೈಲಿಗೆ ಕಳುಹಿಸಲಿ. ನನ್ನ ಬಗ್ಗೆ ಪ್ರತಾಪ್ ಸಿಂಹ ಮಾತನಾಡುವ ಬದಲು ನಿಮಗೆ ಟಿಕೆಟ್ ತಪ್ಪಿಸಿದ್ದು ಯಾರು ಎಂಬುದನ್ನು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು.
ಬಿಜೆಪಿ ಅಭ್ಯರ್ಥಿ ಯದುವೀರ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂಬ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ್, ವಿಶ್ವನಾಥ್ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದವರು, ಅವರು ಬಿಜೆಪಿ ಪಕ್ಷದವರು. ಹಾಗಾಗಿ ಅವರು ಯದುವೀರ್ ಪರವಾಗಿ ನಿಲ್ಲುವುದು ಸಹಜ. ಹಾಗಾಗಿ ಅವರ ಹೇಳಿಕೆಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ. ನನ್ನ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ನಿಂತಿದ್ದಾರೆ. ನಮ್ಮ ಸರ್ಕಾರದ ಜನಪರ ಯೋಜನೆಗಳ ನನ್ನ ಕೈಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.