ಜಿಲ್ಲೆಯ ಮಕ್ಕಳಿಗಷ್ಟೇ ಜನರಿಂದ ಆರ್ಶೀವಾದ: ಎಚ್‌ಡಿಕೆಗೆ ಶಾಸಕ ರವಿಕುಮಾರ್ ಗಣಿಗ ಟಾಂಗ್

Congress Campaign Mandya
Published on

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಏನು ಕೊಡುಗೆ ನೀಡಿಲ್ಲ. ಇನ್ನು ನಾವು ಈ ಮಣ್ಣಿನ ಮಕ್ಕಳು, ಹುಟ್ಟೋದು ಇಲ್ಲಿಯೇ, ಸಾಯುವುದು ಇಲ್ಲಿಯೇ. ನಮಗೆ ಮಂಡ್ಯ ಜನರ ಆಶೀರ್ವಾದ ಕೇಳುವುದಕ್ಕೆ ಹಕ್ಕಿದೆ. ಅದರಂತೆ ಜಿಲ್ಲೆಯ ತಂದೆ-ತಾಯಂದಿರು ಮಕ್ಕಳಿಗೆ ಆಶೀರ್ವಾದ ಮಾಡುತ್ತಾರೆ ಎಂದು ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿ ಎಚ್‌ಡಿಕೆ ವಿರುದ್ಧ ಶಾಸಕ ರವಿಕುಮಾರ್ ಗಣಿಗ ಟೀಕಿಸಿದರು.

ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ವಾರ್ ಚಂದ್ರು) ಜತೆಗೂಡಿ ಪ್ರಚಾರ ನಡೆಸಿದ ಅವರು, ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇನ್ನು ಕಳೆದ ವಿಧಾನಸಭೆ ಚುನಾವಣೆ ವೇಳೆ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದಾಗ ನಮ್ಮ ವಿರೋಧಿಗಳು ನಕ್ಕು ಇದೆಲ್ಲ ಸಾಧ್ಯವಾ ಎಂದಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ವರ್ಷ ತುಂಬುವ ಮುನ್ನವೇ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ, ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸೇರಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದರು.

ಇದೀಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 25 ಗ್ಯಾರಂಟಿ ಘೋಷಿಸಿದೆ. ಇದರಲ್ಲಿ ಮಹಿಳೆಯರಿಗೆ 1 ಲಕ್ಷ ರೂ ನೀಡುವ ಯೋಜನೆ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡಿ ಗೆಲ್ಲಿಸಿ ಕೊಡುವಂತೆ ಮನವಿ ಮಾಡಿದರು.

ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಪ್ರಚಾರದ ವೇಳೆ ಹಳ್ಳಿಯಲ್ಲಿ ಸಾವಿರಾರು ಜನರು ಸೇರುತ್ತಿದ್ದಾರೆ. ಯುವಕರು, ಮಹಿಳೆಯರು ಕಾಂಗ್ರೆಸ್ ಪರ ನಿಂತಿದ್ದಾರೆ. ಗ್ಯಾರಂಟಿಯನ್ನ ಅನುಷ್ಠಾನಕ್ಕೆ ತಂದಿದ್ದೇವೆ. ನೂರಕ್ಕೆ ನೂರು ಮಹಿಳೆಯರು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ. ಎಲ್ಲರೂ ಸ್ವಾಭಿಮಾನದ ಚುನಾವಣೆ ಅಂತಿದ್ದಾರೆ, ಅದು ನಿಜವೇ ಆಗಿದೆ. ರಾಜ್ಯ, ಸ್ಥಳೀಯ ನಾಯಕರು ಮೂರು ಸುತ್ತು ಪ್ರಚಾರ ಮಾಡಿದ್ದಾರೆ. ಮುಂದೆ ರಾಷ್ಟ್ರೀಯ, ರಾಜ್ಯ ನಾಯಕರು ಪ್ರಚಾರಕ್ಕೆ ಬರುತ್ತಿದ್ದಾರೆ. ಇದು ನನಗೆ ಬೂಸ್ಟ್ ಕೊಟ್ಟಂತೆ ಆಗುತ್ತದೆ ಎಂದರು.

ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಜಿಪಂ ಮಾಜಿ ಅಧ್ಯಕ್ಷ ಯೋಗೇಶ್, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಚಿದಂಬರ್, ಮುಖಂಡ ಕೀಲಾರ ರಾಧಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಇತರರಿದ್ದರು.

ಚಿಕ್ಕಮಂಡ್ಯದಿಂದ ಬೈಕ್ ರ‌್ಯಾಲಿ ಮೂಲಕ ಪ್ರಾರಂಭವಾದ ಮತಯಾಚನೆ ಹಲವು ಗ್ರಾಪಂನಲ್ಲಿ ನಡೆಯಿತು. ಇನ್ನು ಧ್ವಜ ಪ್ರಕರಣದಲ್ಲಿ ರಾಜ್ಯದ ಗಮನಸೆಳೆದಿದ್ದ ಕೆರಗೋಡು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಪೂರ್ಣ ಕುಂಭ ಹೊತ್ತು ಸ್ವಾಗತಿಸಿದರೆ, ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಕೂಗುವ ಮೂಲಕ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net