

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತ ನೀತಿಗಳಿಂದ ಜನರ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ನಗರದ ವಿನಯ್ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಪಂ ಮಟ್ಟದ ಸಮಿತಿ ಮತ್ತು ಬೂತ್ ಏಜೆಂಟರ ನೇಮಕ ಸಭೆಯಲ್ಲಿ ಮಾತನಾಡಿ, ಬಿಜೆಪಿ ಮೇಲಿನ ನಿರೀಕ್ಷೆ ಹುಸಿಯಾಗಿದೆ. ದೊಡ್ಡ ಭರವಸೆಗಳನ್ನು ನೀಡಿ ಅಧಿಕಾರ ಪಡೆದುಕೊಂಡು ನಂತರ ಬಡ ಮತ್ತು ಮಧ್ಯಮ ವರ್ಗದವರನ್ನು ಬೀದಿಪಾಲು ಮಾಡಿದೆ ಎಂದು ಕಿಡಿಕಾರಿದರು.
ಜನ ವಿರೋಧಿ ನೀತಿಗಳ ವಿರುದ್ಧ ಸಂಘಟನಾತ್ಮಕ ಹೋರಾಟ ಅಗತ್ಯವಾಗಿದ್ದು, ಬೂತ್ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಮೂಲಕ ಪಕ್ಷ ಸಂಘಟಿಸಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಅಗತ್ಯ ವಸ್ತುಗಳು ಮತ್ತು ಇಂಧನ ಬೆಲೆ ಏರಿಕೆ, ನಿರುದ್ಯೋಗವೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ ಎಂದು ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ವ್ಯಂಗ್ಯವಾಡಿದರು. ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಅನ್ಯ ಪಕ್ಷದ ಶಾಸಕರನ್ನು ಸೆಳೆಯುವ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದರ ನೀತಿಗಳ ಬಗ್ಗೆ ಈಗಾಗಲೇ ಜನರಿಗೆ ಅರಿವಾಗಿದ್ದು, ಇದನ್ನರಿತು ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಕಾಂಗ್ರೆಸ್‌ನ ಭದ್ರಕೋಟೆ. ಪಕ್ಷದ ಪರವಾಗಿ ಒಲವು ಹಿಂದಿಗಿಂತಲೂ ಹೆಚ್ಚಾಗಿದೆ, ಮುಂಬರುವ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಸಂಘಟನೆಗೆ ಸಜ್ಜಾಗಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಜಿಪಂ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್, ಮುಖಂಡರಾದ ಮುನೇಗೌಡ, ಎಂ.ವಿ.ಕರಷ್ಣಪ್ಪ, ಜಯರಾಮ್, ಸುಮಿತ್ರಮ್ಮ ಮತ್ತಿತರರು ಇದ್ದರು.
ಬ್ರಿಟಿಷರು, ಮೊಘಲಗಿಂತಲೂ ಕಡೆ: ದೇಶವನ್ನು ಲೂಟಿ ಮಾಡಿದ ಈಸ್ಟ್ ಇಂಡಿಯಾ ಕಂಪನಿ ಮತ್ತು ಬಿಜೆಪಿಗೂ ವ್ಯತ್ಯಾಸವಿಲ್ಲ. ಇವರ ಆಡಳಿತ ಬ್ರಿಟಿಷರು ಹಾಗೂ 17 ಬಾರಿ ದಂಡೆತ್ತಿ ಬಂದ ಮೊಘಲರಿಗಿಂತಲೂ ಕಡೆಯಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬಿಜೆಪಿ ಮಾರಾಟ ಮಾಡುತ್ತಿದೆ. ಇದೆಲ್ಲ ಈಸ್ಟ್ ಇಂಡಿಯಾ ಕಂಪನಿ ದರೋಡೆಕೋರರಿಗೆ ಮಾದರಿಯಾದ ಕೆಲಸವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಈಶ್ವರಪ್ಪಗೆ ಟಾಂಗ್: ಅಧಿಕಾರ ಇರಲಿ, ಇಲ್ಲದಿದ್ದಲ್ಲಿ ಕಾಂಗ್ರೆಸ್ ಸಾವಿರಾರು ವರ್ಷ ಜನರ ಮನಸ್ಸಿನಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದ್ದು, ಸತ್ತು ಹೋದ ಪಕ್ಷ ಎನ್ನುವವರಿಗೆ ಬಹುಬೇಗನೇ ತಿಳಿಯಲಿದೆ ಎನ್ನುವ ಮೂಲಕ ಸಚಿವ ಕೆ.ಎಸ್.ಈಶ್ವರಪ್ಪಗೆ ಟಾಂಗ್ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರರೇ?: ಬಿಜೆಪಿಯಲ್ಲಿರುವ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆಯೇ? ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್ ಪಾತ್ರವೇನಾದರೂ ಇದೆಯೇ?. ಹೀಗಿರುವಾಗ ಹೋರಾಟದಲ್ಲಿ ಭಾಗವಹಿಸದವರು ದೇಶ ಭಕ್ತರೆನಿಸಿಕೊಳ್ಳಲು ಅರ್ಹರೇ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.