ಅರಳಿದ ಕೈ ಮುದುಡಿದ ತಾವರೆ: ಕೊಪ್ಪಳ ನಗರಸಭೆಗೆ ಶಿವಗಂಗಾ ಅಧ್ಯಕ್ಷೆ, ರುಬಿನಾ ಉಪಾಧ್ಯಕ್ಷೆ

020622 Koppal Muncipality President Selection
ಕೊಪ್ಪಳ ನಗರಸಭೆಯ ನೂತನ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್ ಹಾಗೂ ಉಪಾಧ್ಯಕ್ಷೆ ಆಯೇಷಾ ರುಬಿನಾ ಬೆಂಬಲಿಗರೊಂದಿಗೆ ಗುರುವಾರ ಸಂಭ್ರಮ ಆಚರಿಸಿದರು.
Published on

ಕೊಪ್ಪಳ: ಇಲ್ಲಿನ ನಗರಸಭೆಗೆ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಶಿವಗಂಗಾ ಭೂಮಕ್ಕನವರ್, ಉಪಾಧ್ಯಕ್ಷೆಯಾಗಿ ಜೆಡಿಎಸ್‌ನ ಆಯೇಷಾ ರುಬಿನಾ ಗುರುವಾರ ಅವಿರೋಧ ಆಯ್ಕೆಯಾದರು.

ನಗರಸಭೆ 31 ಸದಸ್ಯ ಬಲ ಹೊಂದಿದ್ದು, 15 ಕಾಂಗ್ರೆಸ್, 10 ಬಿಜೆಪಿ, ಮೂವರು ಪಕ್ಷೇತರ, ಇಬ್ಬರು ಜೆಡಿಎಸ್ ಹಾಗೂ ಒಬ್ಬ ವೆಲ್ಫೇರ್ ಪಾರ್ಟಿ ಸದಸ್ಯರಿದ್ದಾರೆ. ಕಳೆದ ಅವಧಿಯಲ್ಲಿ ಇಬ್ಬರು ಜೆಡಿಎಸ್, ಇಬ್ಬರು ಪಕ್ಷೇತರರು ಹಾಗೂ ವೆಲ್ಫೇರ್ ಪಾರ್ಟಿ ಸದಸ್ಯರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಕಾರಣ ಕಾಂಗ್ರೆಸ್ ಅಧಿಕಾರ ನಡೆಸಿದೆ. ಒಳ ಒಪ್ಪಂದದಂತೆ 15 ತಿಂಗಳಿಗೆ ಅಧ್ಯಕ್ಷೆಯಾಗಿದ್ದ ಲತಾ ಚಿನ್ನೂರು, ಉಪಾಧ್ಯಕ್ಷೆ ಜರೀನಾ ಬೇಗಂ ರಾಜೀನಾಮೆ ಸಲ್ಲಿಸಿದ ಕಾರಣ ಮರು ಚುನಾವಣೆ ನಡೆಸಲಾಯಿತು. ಬೆಳಗ್ಗೆ 10ಗಂಟೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿ 12ಗಂಟೆಗೆ ಮುಕ್ತಾಯವಾಯಿತು. ಈ ಅವಧಿಯಲ್ಲಿ 29ನೇ ವಾರ್ಡ್‌ನ ಶಿವಗಂಗಾ ಭೂಮಕ್ಕನವರ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ 19ನೇ ವಾರ್ಡ್‌ನ ಆಯೇಷಾ ರುಬಿನಾ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. 2ಗಂಟೆ ಬಳಿಕ ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ, ಎಸಿ ಬಸವಣ್ಣಪ್ಪ ಕಲಶೆಟ್ಟಿ, ಅವಿರೋಧ ಆಯ್ಕೆ ಘೋಷಿಸಿದರು.

ಈ ವೇಳೆಗಾಗಲೇ ನಗರಸಭೆ ಆವರಣದಲ್ಲಿ ಜಮಾಯಿಸಿದ್ದ ಕಾಂಗ್ರೆಸ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಹಚ್ಚಿ ಸಂಭ್ರಮ ಆಚರಿಸಿದರು. ಅಧ್ಯಕ್ಷೆ-ಉಪಾಧ್ಯಕ್ಷೆಯನ್ನು ಟ್ರಾೃಕ್ಟರ್‌ನಲ್ಲಿ ಕೂಡಿಸಿಕೊಂಡು ಮೆರವಣಿಗೆ ಮಾಡಿದರು.

ನಿಷ್ಕ್ರಿಯವಾದ ಕಮಲ ಪಡೆ
ರಾಷ್ಟ್ರ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಗರಸಭೆ ಚುನಾವಣೆಯಲ್ಲಿ ಸಂಪೂರ್ಣ ನಿಷ್ಕ್ರಿಯವಾದಂತೆ ಕಂಡಬಂತು. ಕಳೆದ ಚುನಾವಣೆಯಲ್ಲಿ ಓರ್ವ ಪಕ್ಷೇತರ ಸದಸ್ಯನ ಬೆಂಬಲ ಪಡೆದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಚುನಾವಣೆ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಂಸದ ಸಂಗಣ್ಣ ಕರಡಿ ಸ್ಪರ್ಧೆ ಆಯ್ಕೆಯನ್ನು ಅಭ್ಯರ್ಥಿಗಳಿಗೆ ಬಿಟ್ಟಿದ್ದರೆನ್ನಲಾಗಿದೆ. ಸ್ವಯಂ ನಿರ್ಧಾರ ತೆಗೆದುಕೊಳ್ಳಲಾಗದೆ ನಾಮಪತ್ರ ಸಲ್ಲಿಕೆ ಅವಧಿ ಮುಗಿಯುವವರೆಗೆ ಬಿಜೆಪಿಯ 10 ಸದಸ್ಯರು ಯಾರೊಬ್ಬರ ಕರೆ ಸ್ವೀಕರಿಸದೆ ಅಜ್ಞಾತವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net