ಕೈ-ಕಮಲ ನಾಯಕರ ಮಧ್ಯೆ ಬ್ಯಾನರ್ ಜಗಳ

CONGRESS AND BJP
Published on

ದಾವಣಗೆರೆ: ಕೋವಿಡ್ ಲಸಿಕೆ ನೀಡುವ ವಿಚಾರ ಜಿಲ್ಲೆಯಲ್ಲಿ ಬಿಜೆಪಿ -ಕಾಂಗ್ರೆಸ್ ನಡುವೆ ‘ಬ್ಯಾನರ್ ಜಗಳ’ಕ್ಕೆ ಕಾರಣವಾಗಿದೆ. ಜನಾರೋಗ್ಯದ ಕಾಳಜಿ ಮಾಯವಾಗಿ ರಾಜಕೀಯ ಕೆಸರೆರಚಾಟ ಶುರುವಾಗಿದೆ.


ಜಿಲ್ಲೆಯ ಜನರ ಬೇಡಿಕೆಗೆ ತಕ್ಕಂತೆ ಸರ್ಕಾರದಿಂದ ವ್ಯಾಕ್ಸಿನ್ ನೀಡಿಕೆ ಚುರುಕಾಗಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಜನರ ಪ್ರಾಣ ರಕ್ಷಣೆಗೆ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡುವುದಾಗಿ ಘೋಷಿಸಿ, ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜೂನ್ ಮೊದಲ ವಾರದಿಂದ ಲಸಿಕೆ ಶಿಬಿರಗಳಿಗೆ ಚಾಲನೆ ನೀಡಿದ್ದರು.


ಮೇಯರ್ ಪ್ರತಿನಿಧಿಸುವ ವಾರ್ಡ್‌ನಲ್ಲಿ ಶಾಮನೂರು ಬಳಗ, ಸೋಮವಾರ ಹಮ್ಮಿಕೊಂಡಿದ್ದ ಲಸಿಕಾ ಶಿಬಿರ ವಿವಾದದ ಕಿಡಿಯನ್ನು ಹೊತ್ತಿಸಿತ್ತು. ಸರ್ಕಾರದ ಲಸಿಕೆಯನ್ನು ಕಾಂಗ್ರೆಸ್ ಬ್ಯಾನರ್ ಅಡಿ ನೀಡಲಾಗುತ್ತಿದೆ ಎಂಬುದು ವಿವಾದದ ಮೂಲ. ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿತು.
ಸರ್ಕಾರದಿಂದ ಪೂರೈಸಿದ ಲಸಿಕೆ ನೀಡುವಾಗ ಪ್ರಧಾನಿ ಹಾಗೂ ಸಿಎಂ ಅವರ ಭಾವಚಿತ್ರಗಳಿರುವ ಬ್ಯಾನರ್ ಮಾತ್ರ ಹಾಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಾಕೀತು ಮಾಡಿದರು. ಅವರು ಸ್ವಂತ ಖರ್ಚಿನಲ್ಲಿ ಲಸಿಕೆ ನೀಡಿದರೆ ತಕರಾರಿಲ್ಲ, ಸರ್ಕಾರದ ಲಸಿಕೆಯನ್ನೂ ಸೇರಿಸಿ ನಾವೇ ಕೊಟ್ಟೆವು ಎಂದು ಬಿಂಬಿಸಿಕೊಳ್ಳುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ಜನ 4 ಬಾರಿ ಪಾಠ ಕಲಿಸಿದ್ದಾರೆ
ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂಬ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಕ್ಷೇತ್ರದ ಜನರು 4 ಬಾರಿ ತಮ್ಮನ್ನು ಗೆಲ್ಲಿಸುವ ಮೂಲಕ ಎದುರಾಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಟಾಂಗ್ ಕೊಟ್ಟರು. ಎರಡು ಲಕ್ಷ ಜನರಿಗೆ ಲಸಿಕೆ ಕೊಡ್ತೀವಿ ಅಂತ ಹೇಳಿದ್ದರು, ಜನರಿಗೆ ಉಚಿತವಾಗಿ ಕೊಡುವುದಾಗಿ ಹೇಳಿ ಅವರ ಆಸ್ಪತ್ರೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net