

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ಗೆ ಮಾತನಾಡಲು, ಚರ್ಚಿಸಲು ಬೇರೆ ವಿಷಯಗಳಿಲ್ಲ. ಹೀಗಾಗಿ ರೌಡಿ ರಾಜಕೀಯ ಪ್ರಸ್ತಾಪಿಸಿ ಬಿಜೆಪಿ ಮೇಲೆ ಕೆಸರೆರಚಲು ಪ್ರಯತ್ನಿಸುತ್ತಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವ್ಯಂಗ್ಯವಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ರೌಡಿಗಳು ಅಥವಾ ಅಪರಾಧ ಹಿನ್ನೆಲೆ ಉಳ್ಳವರಿಗೆ ಸೇರಲು ಪಕ್ಷ ಯಾವುದೇ ಕಾರಣಕ್ಕೂ ಅವಕಾಶ ನೀಡದು. ಈ ವಿಷಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಪಕ್ಷದ ನಿಲುವೇನೆಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರೀಯ ಸಮಿತಿ ನಿರ್ಧಾರ
ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಆಯ್ಕೆ ಮಾಡುತ್ತದೆ. ಗುಜರಾತ್ ಮಾದರಿಯೋ ಅಥವಾ ಬೇರೆ ಯಾವುದೋ ಮಾದರಿಯೋ ಎನ್ನುವುದೆಲ್ಲ ಕೇಂದ್ರೀಯ ಸಮಿತಿಗೆ ಬಿಟ್ಟದ್ದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಜನಸಂಕಲ್ಪ ಯಾತ್ರೆಗೆ ಭರ್ಜರಿ ಸ್ಪಂದನೆ ದೊರೆಯುತ್ತಿದೆ. ಎರಡೂ ಮೋರ್ಚಾಗಳ ಸಮಾವೇಶದಲ್ಲಿ ಜನರು ಭಾರಿ ಪ್ರಮಾಣದಲ್ಲಿ ನೆರೆದಿದ್ದರು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಜನರು ಬಯಸಿದ್ದು, 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ನಿಶ್ಚಿತವೆಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.