ಪ್ರಾದೇಶಿಕ ಪಕ್ಷವಾಗುತ್ತಿರುವ ಕಾಂಗ್ರೆಸ್ : ಜೋಶಿ ವ್ಯಂಗ್ಯ

PralhadJoshi Slams Siddaramaiah
Published on

ಹುಬ್ಬಳ್ಳಿ : ಇಂಡಿ ಮೈತ್ರಿಕೂಟದಿಂದ ಕಾಂಗ್ರೆಸ್ ಅನ್ನು ಹೊರಹಾಕಲಾಗಿದೆ. ಆ ಪಕ್ಷಕ್ಕೆ ಎಲ್ಲಿಯೂ ನೆಲೆ ಇಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಳಜಗಳ ಹಾಗೂ ನಾಯಕರ ಸೊಕ್ಕಿನ ಪರಿಣಾಮ ಕಾಂಗ್ರೆಸ್ ದುಸ್ಥಿತಿಗೆ ತಲುಪಿದೆ. ಇನ್ನಾದರೂ ಅಹಂಕಾರ ಬಿಡಲಿ. ಡಿಸಿಎಂ ಡಿ.ಕೆ. ಶಿವಕುಮಾರ ಅವರು ಶತ್ರು ಸಂಹಾರ ಪೂಜೆ ಮಾಡಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅವರ ಶತ್ರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೋ ಅಥವಾ ಗೃಹ ಸಚಿವ ಪರಮೇಶ್ವರ ಅವರೋ ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ. ನಮ್ಮ ಪಕ್ಷದವರು ಬೇರೆಯವರನ್ನು ಪ್ರತಿಸ್ಪರ್ಧಿಗಳೆಂದು ಕಾಣುತ್ತೇವೆಯೇ ಹೊರತು, ಶತ್ರುಗಳೆಂದಲ್ಲ ಎಂದು ಹೇಳಿದರು.

ಒಳ ಜಗಳ, ಭ್ರಷ್ಟಾಚಾರ, ಹಗರಣಗಳಿಂದಾಗಿ ಸರ್ಕಾರಕ್ಕೆ ಆಡಳಿತದಲ್ಲಿ ನಿಯಂತ್ರಣ ಸಿಗುತ್ತಿಲ್ಲ. ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಕಾಂಗ್ರೆಸ್ ಯಾವತ್ತೂ ದಲಿತರ ಪರವಾಗಿಲ್ಲ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ಕಾಂಗ್ರೆಸ್ ನಾಯಕರು ಗೌರವ ಕೊಡಲಿಲ್ಲ. ಇನ್ನೂ, ಈಗಿನ ದಲಿತ ನಾಯಕರಿಗೆ ಗೌರವ ಕೊಡುತ್ತದೆ ಎಂಬ ಭ್ರಮೆ ಏಕೆ ಎಂದು ಪ್ರಶ್ನಿಸಿದ ಸಚಿವ ಜೋಶಿ, ದಲಿತ ನಾಯಕರು ಕಾಂಗ್ರೆಸ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಸಲಹೆ ನೀಡಿದರು.

ಐದಾರು ಜನ ನಕ್ಸಲರು ಶರಣಾಗುತ್ತಿದ್ದಂತೆಯೇ ರಾಜ್ಯದಲ್ಲಿ ನಕ್ಸಲ್ ಹಾವಳಿ ಮುಗಿಯಿತೆಂದು ಸರ್ಕಾರ ಹೇಳುತ್ತಿರುವುದು ಸರಿಯಲ್ಲ. ನಕ್ಸಲರ ಶರಣಾಗತಿ ಬಗ್ಗೆ ಹಲವಾರು ಸಂಶಯಗಳಿವೆ. ಶರಣಾಗತಿ ಪ್ರಕ್ರಿಯೆ ತರಾತುರಿಯಲ್ಲಿ ನಡೆದಿದೆ. ನಕ್ಸಲ್ ಚಳುವಳಿಯನ್ನು ಬೇರು ಸಮೇತ ಹೊಸಕಿ ಹಾಕುವುದು ನಮ್ಮ ಗುರಿ. ಆದರೆ, ಆಂಟಿ ನಕ್ಸಲ್ ಕಾರ್ಯಾಚರಣೆ ನಿಲ್ಲಿಸುವುದಾಗಿ ಹೇಳುವ ಸರ್ಕಾರ ಕ್ರಮ ಎಷ್ಟರ ಮಟ್ಟಿಗೆ ಸರಿ ? ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ರೀತಿಯಲ್ಲಿ ಡಿನ್ನರ್ ಪಾರ್ಟಿ ಕರೆದಿಲ್ಲ. ಪಕ್ಷದ ಸಭೆ ಕರೆದಿದ್ದರಷ್ಟೇ. ನಾನು ಸಹ ಸಭೆಗೆ ಹೋಗಿದ್ದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net