

ಮದ್ದೂರು: ಮನ್‌ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಮನ್‌ಮುಲ್ ಅಧಿಕಾರದ ಗದ್ದುಗೆ ಹಿಡಿಯಲಿರುವುದಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು ತಿಳಿಸಿದರು.
ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪನ ದೇವಾಲಯದಲ್ಲಿ ಸೋವವಾರ ವಿಶೇಷ ಪೂಜೆ ಸಲ್ಲಿಸಿ ಮನ್‌ಮುಲ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಕೆ.ಎಂ.ಉದಯ್ ಅವರು ಕದಲೂರು ರಾಮಕೃಷ್ಣ ಹಾಗೂ ಹರೀಶ್ ಅವರನ್ನು ಅಧಿಕೃತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದ್ದು ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವುದಾಗಿ ಹೇಳಿದರು.
ಹಾಲು ಉತ್ಪಾದಕರ ಮತ್ತು ಸಹಕಾರ ಸಂಘಗಳ ಶ್ರೇಯೋಭಿವೃದ್ಧಿಗೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರಲ್ಲದೆ ಪಕ್ಷದ ಮತದಾರರೊಟ್ಟಿಗೆ ಇತರ ಪಕ್ಷದ ಮುಖಂಡರು ಮತದಾರರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡುವುದಾಗಿ ಹೇಳಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಹಾಗೂ ಅಭ್ಯರ್ಥಿ ಕದಲೂರು ರಾಮಕಷ್ಣ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಕೆ.ಎಂ.ಉದಯ್ ಅವರು ನನ್ನನ್ನು ಹಾಗೂ ಹರೀಶ್ ಅವರನ್ನು ಚುನಾವಣಾ ಕಣದಲ್ಲಿರಿಸಿದ್ದು ಈಗಾಗಲೇ ಮತದಾರರನ್ನು ಸಂಪರ್ಕಿಸಿ ತಮ್ಮ ಗೆಲುವಿಗೆ ಸಹಕಾರ ನೀಡುವಂತೆ ಕೋರಿರುವುದಾಗಿ ಹೇಳಿದರು.
ಯಾವುದೇ ಚುನಾವಣೆಗಳ ಪ್ರಚಾರಕ್ಕೂ ಮುನ್ನ ಗ್ರಾಮದ ಗಡಿಭಾಗ ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪನ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದ್ದು ಅದರಂತೆಯೇ ಪಕ್ಷದ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿರುವುದಾಗಿ ತಿಳಿಸಿದರು.
ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ಶಾಸಕರು ಕಾರ್ಯತಂತ್ರ ಎಣೆಯುತ್ತಿದ್ದು ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮತದಾರರು, ಮುಖಂಡರೊಟ್ಟಿಗೆ ಚರ್ಚಿಸಲು ಆಯಾ ವ್ಯಾಪ್ತಿಯಲ್ಲಿ ಸಬೆಗಳನ್ನು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಮತ್ತು ಉತ್ಪಾದಕರ ಮತ್ತು ಸಹಕಾರ ಸಂಘಗಳ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದು ಮತ್ತೊಮ್ಮೆ ಇಬ್ಬರಿಗೂ ಅವಕಾಶ ಕಲ್ಪಿಸುವಂತೆ ಕೋರಿದರು.
ಮಲ್ಲನಕುಪ್ಪೆ ಗ್ರಾ.ಪಂ. ಅಧ್ಯಕ್ಷೆ ಕವಿತಾ, ಕದಲೂರು ಗ್ರಾ.ಪಂ. ಅಧ್ಯಕ್ಷ ಕೆ.ಟಿ.ತಿಮ್ಮೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ನಾಗೇಗೌಡ, ಟಿ.ಎ.ಪಿ.ಸಿ.ಎಂ.ಎಸ್. ಸದಸ್ಯ ಚಂದ್ರನಾಯಕ್, ಮಾಜಿ ಸದಸ್ಯ ಕೆ.ಆರ್.ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮಾಜಿ ಸದಸ್ಯರಾದ ಎನ್.ಆರ್.ರಘು, ಡಾಬಾ ಮಹೇಶ್, ಸ್ಥಳೀಯ ಮುಖಂಡರಾದ ಕೆ.ದಾಸೇಗೌಡ, ಮಧು, ಕುಮಾರ್, ಅಶೋಕ್, ತಿಮ್ಮ, ಶಂಕರಲಿಂಗಯ್ಯ, ಪ್ರೀತಮ್, ಕಿರಣ್, ರಾಕೇಶ್ ಇತರರಿದ್ದರು.