ರೈತರ ಆಸ್ತಿ ಕಬಳಿಸಲು ಕಾಂಗ್ರೆಸ್ ಯತ್ನ

MLA S.N. Chanabasappa
ಶಾಸಕ ಎಸ್.ಎನ್.ಚನ್ನಬಸಪ್ಪ
Published on

ಶಿವಮೊಗ್ಗ: ವಕ್ಫ್ ಬೋರ್ಡ್‌ನಿಂದ ಸರ್ಕಾರದ ಆಸ್ತಿ ಜತೆಗೆ ರೈತರ ಆಸ್ತಿಯನ್ನೂ ಕಬಳಿಸುವ ಮೂಲಕ ರಾಜ್ಯದಲ್ಲಿ ಮುಸ್ಲಿಂ ಆಡಳಿತ ತರುವ ಹುನ್ನಾರ ನಡೆಯುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ದೂರಿದರು.

ರಾಜ್ಯದ ಬಹುತೇಕ ಆಸ್ತಿಯನ್ನು ವಕ್ಫ್‌ನಡಿ ತರಲು ಕಾಂಗ್ರೆಸ್ ಮುಂದಾಗಿದೆ. ವಕ್ಫ್ ಮೂಲಕ ಭೂ ಮಾಫಿಯಾ ನಡೆಯುತ್ತಿದೆ. ಇದರ ಹಿಂದೆ ಲ್ಯಾಂಡ್ ಜಿಹಾದ್ ಇರುವ ಶಂಕೆ ವ್ಯಕ್ತವಾಗಿದೆ. ಮುಂದೆ ವಕ್ಫ್ ಯಾವ ಜಾಗಕ್ಕೆ ಕಾಲಿಡುತ್ತದೋ, ಯಾರ ಆಸ್ತಿಗೆ ಬೋರ್ಡ್ ಹಾಕುತ್ತದೋ ಗೊತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅನುಮಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲಿದೆ ಎಂಬ ಭಯದಿಂದ ರೈತರ ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ಮೊಹರು ಹಾಕಲಾಗುತ್ತಿದೆ. 1850ರಲ್ಲಿ ಬೆಂಗಳೂರು ಮೈದಾನ ವಕ್ಫ್‌ಗೆ ಸೇರಿತು. ಕೋಲ್ಕತದ ಗಾಲ್ಫ್ ಕ್ಲಬ್, ವಿನ್ಸೆಂಟ್ ಮ್ಯಾನರ್, ತಮಿಳುನಾಡಿನಲ್ಲಿ ತಿರುಚಂದೂರಿನ ಜಮೀನು, ಇದೀಗ ಸಂಸತ್ ಭವನ ಜಾಗವನ್ನೂ ವಕ್ಫ್ ಬೋರ್ಡ್‌ನದ್ದು ಎಂದು ಹೇಳುತ್ತಿರುವುದು ದುರ್ದೈವದ ಸಂಗತಿ ಎಂದು ಕಿಡಿಕಾರಿದರು.

ದೇವಸ್ಥಾನಗಳೇ ವಕ್ಫ್ ಆಸ್ತಿ ಆಗುತ್ತಿದೆ ಹೇಗೆ ಎಂದು ಪ್ರಶ್ನಿಸಿದ ಅವರು, ಇದಕ್ಕೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಕುಮ್ಮಕ್ಕಿದೆ. ಅವರು ಬಡವರಿಗೆ ಸೂರು ಕೊಡುವ ಬಗ್ಗೆ ಯೋಚಿಸುತ್ತಿಲ್ಲ. ಬದಲಾಗಿ ಬಡ ರೈತರ ಆಸ್ತಿಯನ್ನು ವಕ್ಫ್‌ಗೆ ತೆಗೆದುಕೊಂಡು ಹೋಗುವ ಬಗ್ಗೆ ಚಿಂತಿಸುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲೇಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net