ಗ್ರೇಟರ್ ಮೈಸೂರು ರಚನೆ ತಪ್ಪಿಸಲು ಕಾಂಗ್ರೆಸ್ ಪ್ರಯತ್ನ : ಮೇಯರ್ ಶಿವಕುಮಾರ್ ಆರೋಪ

mcc
Published on

ಮೈಸೂರು: ಮೈಸೂರು ಬೃಹತ್ ಮಹಾನಗರ ಪಾಲಿಕೆ (ಗ್ರೇಟರ್ ಮೈಸೂರು) ರಚನೆಯಾಗುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ನಗರ ಪಾಲಿಕೆ ಕಾಂಗ್ರೆಸ್ ಸದಸ್ಯರ ಒತ್ತಡದ ಮೇರೆಗೆ ಪಾಲಿಕೆ ಆಯುಕ್ತರು ನಿಯಮ ಬಾಹಿರವಾಗಿ ಇಂದು ಹಮ್ಮಿಕೊಂಡಿದ್ದ ನಗರ ಪಾಲಿಕೆ ಕೌನ್ಸಿಲ್ ಸಭೆಯನ್ನು ಮುಂದೂಡಿದ್ದಾರೆ ಎಂದು ಮೇಯರ್ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮೇಯರ್ ಹಾಗೂ ಉಪ ಮೇಯರ್ ಅಧಿಕಾರಾವಧಿ ಸೆ.5 ರಂದು ಮುಕ್ತಾಯಗೊಳ್ಳಲಿದೆ. ಚುನಾವಣಾ ತಿಂಗಳಿನಲ್ಲಿ (ಸೆಪ್ಟೆಂಬರ್) ಸಭೆ ನಡೆಸಲು ಅವಕಾಶ ಇಲ್ಲ. ಹಾಗಾಗಿ ಆ.31 ರಂದು ಕೌನ್ಸಿಲ್ ಸಭೆಯನ್ನು ಕರೆದಿದ್ದೆ. ಸಭೆಯನ್ನು ಮುಂದೂಡುವ ಅಧಿಕಾರ ಮೇಯರ್‌ಗೆ ಮಾತ್ರ ಇದೆ. ಆದರೆ, ನನ್ನ ಗಮನಕ್ಕೆ ತಾರದೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಸಭೆಯನ್ನು ಮುಂದೂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕ್ಕೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕರ್ನಾಟಕ ಪೌರ ನಿಗಮಗಳ ಅಧಿನಿಯಮ ಪ್ರಕಾರ ಮೇಯರ್‌ಗೆ ಮಾತ್ರ ಸಭೆಯನ್ನು ಮುಂದೂಡುವ ಅಧಿಕಾರ ಇದ್ದರೂ ಕಾಂಗ್ರೆಸ್ ಸದಸ್ಯರ ಒತ್ತಡದ ಮೇರೆಗೆ ಆಯುಕ್ತರು ಸಭೆಯನ್ನು ಮುಂದೂಡಿದ್ದಾರೆ. ನಗರದ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಇಂದು ಸಭೆ ನಡೆಸಿದರು. ಈ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಭೆಯನ್ನು ಮುಂದೂಡಲಾಗಿದೆ ಎಂದು ಆಯುಕ್ತರು ಕಾರಣ ನೀಡಿದ್ದಾರೆ. ಆದರೆ, ಕೌನ್ಸಿಲ್ ಸಭೆ ಮೊದಲೇ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಸಚಿವರಿಗೆ ಈ ವಿಚಾರವನ್ನು ಆಯುಕ್ತರು ಮನವರಿಕೆ ಮಾಡಿಕೊಡಬಹುದಿತ್ತು. ಒಂದುವೇಳೆ ಸಭೆಯನ್ನು ಮುಂದೂಡುವ ಅನಿವಾರ್ಯತೆ ಇದ್ದರೆ ನನ್ನ ಗಮನಕ್ಕೆ ತರಬೇಕಾಗಿದೆ. ಆದರೆ, ನನ್ನ ಹಾಗೂ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಿ ಸಭೆ ಮುಂದೂಡಿರುವುದು ಖಂಡನೀಯ ಎಂದರು.

ಮೈಸೂರು ನಗರ ಪಾಲಿಕೆ, ಹೂಟಗಳ್ಳಿ ನಗರಸಭೆ, ಬೋಗಾದಿ, ಕಡಕೊಳ, ಶ್ರೀರಾಂಪುರ ಮತ್ತು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಹಾಲನಹಳ್ಳಿ, ಚಾಮುಂಡಿಬೆಟ್ಟ, ಇಲವಾಲ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಗಳನ್ನು ಒಟ್ಟು ಸೇರಿಸಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚಿಸಲು ಉದ್ದೇಶಿಸಲಾಗಿದ್ದು, ಈ ವಿಷಯವನ್ನು ಇಂದಿನ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿತ್ತು. ಗ್ರೇಟರ್ ಮೈಸೂರು ರಚನೆಗೆ ಪಾಲಿಕೆ ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧವಿದೆ. ಯಾವ ಕಾರಣಕ್ಕೆ ಅವರು ವಿರೋಧ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಅವರು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಬಹುದಿತ್ತು. ಆದರೆ, ಆಯುಕ್ತರ ಮೇಲೆ ಒತ್ತಡ ಹೇರಿ ಸಭೆ ಮುಂದೂಡುವಂತೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net