ಲೋಕ ಕಲಿಗಳಿಗೆ ಕೈ-ಕಮಲ ಸರ್ಚ್: ಸೋತವರ ನಿರೀಕ್ಷೆಯೇ ಹೆಚ್ಚು, ಸಾಮರ್ಥ್ಯ ಇರುವವರು ಸಾವಧಾನ

Congress BJP
Published on

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಉಮೇದಿನಲ್ಲಿರುವ ರಾಷ್ಟ್ರೀಯ ಪಕ್ಷಗಳಿಗೆ ಅರ್ಧದಷ್ಟು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಸಿಗದೆ ತಡಕಾಟ ನಡೆಸಿವೆ. ಹೊಸ ಮುಖಗಳನ್ನು ಕಣಕ್ಕಿಳಿಸಿ ಪ್ರಯೋಗ ನಡೆಸುವ ಆಸಕ್ತಿ ಎರಡೂ ಪಕ್ಷದಲ್ಲಿ ಇದ್ದಂತಿಲ್ಲ.

ಬಿಜೆಪಿ ವಿಚಾರಕ್ಕೆ ಬಂದರೆ ಒಂಬತ್ತಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಬದಲಿಸುವ ಅನಿವಾರ್ಯತೆ ಇದೆ. ಹಾಲಿ ಸಂಸದರ ಬಗ್ಗೆ ಜನರಲ್ಲಿ ಸದಾಭಿಪ್ರಾಯ ಇಲ್ಲದ ಕಾರಣ ಪರ್ಯಾಯ ಹುಡುಕಾಟ ನಡೆದಿದೆ. ಆದರೆ, ಈ ವರೆಗೆ ನಡೆಸಿರುವ ಹುಡುಕಾಟದಲ್ಲಿ ಆಕಾಂಕ್ಷಿಗಳು ಸಿಕ್ಕಿದ್ದರೂ ಗೆಲ್ಲುತ್ತಾರೆಂಬ ವಿಶ್ವಾಸ ರಾಜ್ಯ ಘಟಕಕ್ಕೆ ಬಂದಿಲ್ಲ. ವಿಶೇಷ ಎಂದರೆ ಜನರಿಗೆ ಪರಿಚಿತವಾದ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೋ ಬೇಡವೋ ಎಂಬ ದ್ವಂದ್ವದಲ್ಲೇ ನಾಯಕರಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮದೇ ನೆಟ್​ವರ್ಕ್​ನಲ್ಲಿ ಪ್ರತಿ ಕ್ಷೇತ್ರದ ಮಾಹಿತಿ ಪಡೆದುಕೊಂಡಿದ್ದು, ಯಾರು ಅಭ್ಯರ್ಥಿಯಾದರೆ ಸೂಕ್ತ ಎಂಬ ಮಾಹಿತಿ ಕಲೆ ಹಾಕಿದ್ದಾರೆ. ಪಕ್ಷದ ಮಾಹಿತಿಗಳ ಪ್ರಕಾರ ಕಳೆದ ವಿಧಾನಸಭೆಯಲ್ಲಿ ಸೋತ ಆರೇಳು ಮಾಜಿ ಸಚಿವರು, ಶಾಸಕರು ಟಿಕೆಟ್ ಬಯಸಿದ್ದಾರೆ. ಇದು ಪಕ್ಷಕ್ಕೆ ಅರಗಿಸಿಕೊಳ್ಳಲಾಗದ ಬೆಳವಣಿಗೆಯಾಗಿದೆ.

ಕಾಂಗ್ರೆಸ್ ವಿಚಾರಕ್ಕೆ ಬಂದರೆ, 28 ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಿಸಲಾಗಿತ್ತು. ಅವರು ಒಂದು- ಎರಡು ಸಭೆ ಮಾಡಿದ್ದಾರೆ. ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದ್ದು, ಬ್ಲಾಕ್ ಘಟಕ ಹಾಗೂ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಲ್ಲಿ 20 ಸ್ಥಾನವನ್ನಾದರೂ ಗೆಲ್ಲಬೇಕೆಂಬ ಗುರಿ ನೀಡಿದ್ದಾರೆ. ಕೆಪಿಸಿಸಿ ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಇಷ್ಟರ ನಡುವೆ 20 ಸ್ಥಾನ ಗೆಲ್ಲಬಹುದಾದ ಸಾಮರ್ಥ್ಯ ಇರುವ ಅಭ್ಯರ್ಥಿಗಳ ಕೊರತೆ ಇದೆ ಎಂಬುದನ್ನು ಪದಾಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಪಕ್ಷದ ಮಾಹಿತಿ ಪ್ರಕಾರ ಜನವರಿ ಮೊದಲ ವಾರದಲ್ಲಿ ಸಂಭಾವ್ಯ ಪಟ್ಟಿ ಅಂತಿಮಗೊಳಿಸಿ, ಮೂರನೇ ವಾರದಲ್ಲಿ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಕೆಲಸ ಆರಂಭಿಸಲು ಸೂಚನೆ ನೀಡಲಾಗುತ್ತದೆ. ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಕಾಂಗ್ರೆಸ್, ಕನಿಷ್ಠ ನಾಲ್ಕು ಸಚಿವರನ್ನು, ಪರಿಷತ್ ಸದಸ್ಯರನ್ನು ಕಣಕ್ಕಿಳಿಸಲು ಬಯಸಿದೆ. ಪಕ್ಷದ ಸೂಚನೆ ಬಂದ ಬಳಿಕ ಮುಂದಿನ ತೀರ್ಮಾನ ಮಾಡಲು ಸಚಿವರು, ಶಾಸಕರು ನಿರ್ಧರಿಸಿದ್ದಾರೆ.

ಆಕಾಂಕ್ಷಿಗಳ ದಂಡು

ಬೆಂಗಳೂರು ದಕ್ಷಿಣಕ್ಕೆ ಮಾಜಿ ಶಾಸಕಿ ಸೌಮ್ಯರೆಡ್ಡಿ ಹೆಸರು ಕೇಳಿಬಂದರೂ, ಸ್ಪಷ್ಟತೆ ಇಲ್ಲ. ತುಮಕೂರು ಕ್ಷೇತ್ರದಿಂದ ಮುರಳೀಧರ ಹಾಲಪ್ಪ, ನಿಕೇತ್ ರಾಜ್ ಮೌರ್ಯ, ನಟರಾಜಗೌಡ ಆಕಾಂಕ್ಷಿಗಳು. ಚಿತ್ರದುರ್ಗದಲ್ಲಿ ಚಂದ್ರಪ್ಪ ಹೆಸರು ಅಂತಿಮವಾಗಿದ್ದರೆ, ದಾವಣಗೆರೆಗೆ ಅಭ್ಯರ್ಥಿ ಹುಡುಕಾಟ ನಡೆದಿದ್ದು, ಶಾಮನೂರು ಶಿವಶಂಕರಪ್ಪ ಸೂಚಿಸಿದವರಿಗೆ ಅವಕಾಶ ದೊರೆಯಲಿದೆ. ಇನ್​ಸೈಟ್ ಐಎಎಸ್ ಅಕಾಡೆಮಿಯ ವಿನಯ್ಕುಮಾರ್ ಹೆಸರು ಕೇಳಿ ಬರುತ್ತಿದೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಹೆಸರು ಚರ್ಚೆಯಲ್ಲಿದ್ದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಭರವಸೆ ಸಿಕ್ಕಿದೆ. ಆದರೆ, ಆರತಿ ಕೃಷ್ಣ, ವಿನಯ್ ಕುಮಾರ್ ಸೊರಕೆ ಸಂಭಾವ್ಯರು. ಬೆಂ.ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್, ಬೆಂ.ಉತ್ತರದಲ್ಲಿ ರಾಜೀವ್​ಗೌಡ, ನಾರಾಯಣಸ್ವಾಮಿ ಹೆಸರು ಪ್ರಸ್ತಾಪವಾಗುತ್ತಿದೆ. ಬೆಂಗಳೂರು ಕೇಂದ್ರದಲ್ಲಿ ಸೈಯದ್ ನಾಸೀರ್ ಹುಸೇನ್, ಮನ್ಸೂರ್ ಖಾನ್, ಎಸ್.ಎ ಹುಸೇನ್ ಆಕಾಂಕ್ಷಿಗಳು. ಆದರೆ, ಇಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿದರೆ ಬಿಜೆಪಿಗೆ ಅನುಕೂಲವಾಗುವ ಕಾರಣ ಒಕ್ಕಲಿಗರನ್ನು ಕಣಕ್ಕಿಳಿಸಬೇಕೆಂಬ ವಾದವಿದೆ.

ಕಾಂಗ್ರೆಸ್​ನಲ್ಲಿ ತಳಮಳ

ಕೋಲಾರದಿಂದ ಕೆ.ಎಚ್ ಮುನಿಯಪ್ಪ ಅಥವಾ ಪುತ್ರಿ ರೂಪಕಲಾ ಶಶಿಧರ್, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ, ಚಾಮರಾಜನಗರದಿಂದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹೆಸರು ಚರ್ಚೆಯಲ್ಲಿದೆ. ಮೈಸೂರು- ಕೊಡಗು ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ಹೆಸರು ಚರ್ಚೆಯಲ್ಲಿದೆಯಾದರೂ, ಕೆಪಿಸಿಸಿ ವಕ್ತಾರ ಲಕ್ಷ್ಮಣ, ಸೂರಜ್ ಹೆಗ್ಡೆ, ಡಾ. ರಾಜೇಶ್ ಹೆಸರೂ ಸಂಭಾವ್ಯ ಪಟ್ಟಿಯಲ್ಲಿದೆ. ಇನ್ನೊಂದೆಡೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ನಾಜೂಕು ವರ್ತನೆ, ಹೆಸರನ್ನು ತೇಲಿಬಿಟ್ಟ ವಿಷಯ ಕಾಂಗ್ರೆಸ್ ವಲಯದಲ್ಲಿ ತಳಮಳ ಸೃಷ್ಟಿಸಿದೆ. ಮಂಡ್ಯಕ್ಕೆ ಇಲ್ಲಿವರೆಗೂ ಅಭ್ಯರ್ಥಿ ಸಿಕ್ಕಿಲ್ಲ. ಚಲುವರಾಯಸ್ವಾಮಿ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ಕೆಪಿಸಿಸಿ ಮೂಲಗಳ ವಾದವಾದರೆ, ರಮ್ಯಾ ಒಪ್ಪಿದರೆ ಅವರೇ ಮೊದಲ ಆದ್ಯತೆಯಾಗಲಿದ್ದಾರೆ.

ಖರ್ಗೆ ಸ್ಪರ್ಧೆ ಅನುಮಾನ

ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ ಹೆಸರು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಖರ್ಗೆ ದೇಶದೆಲ್ಲೆಡೆ ಪ್ರಚಾರ ನಡೆಸಬೇಕಿರುವ ಕಾರಣಕ್ಕೆ ಸ್ಪರ್ಧೆ ಸಾಧ್ಯತೆ ಕಡಿಮೆ ಎನ್ನಲಾಗಿದೆ. ದ.ಕ. ಕ್ಷೇತ್ರದಿಂದ ರಮಾನಾಥ ರೈ ಅಥವಾ ಮಿಥುನ್ ರೈ, ಹುಬ್ಬಳ್ಳಿ-ಧಾರವಾಡದಲ್ಲಿ ರಜತ್ ಉಳ್ಳಾಗಡ್ಡಿ ಪ್ರಬಲ ಆಕಾಂಕ್ಷಿಗಳು, ಉತ್ತರ ಕನ್ನಡದಲ್ಲಿ ಸ್ಪರ್ಧೆಗೆ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಆಸಕ್ತಿ ತೋರಿದ್ದಾರೆ. ಹಾವೇರಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೆಸರು ಖಚಿತ ಎನ್ನಲಾಗುತ್ತಿದೆ. ಬೀದರ್​ನಲ್ಲಿ ಈಶ್ವರ ಖಂಡ್ರೆಯೇ ಸೂಕ್ತ ಎಂಬ ವಾದ ಪಕ್ಷದಲ್ಲಿದೆ. ಇನ್ನು ಬಳ್ಳಾರಿ ಮೇಲೆ ಉಗ್ರಪ್ಪ, ವಿಜಯಪುರದಿಂದ ಸುನೀಲ್ ಪಾಟೀಲ್, ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್, ಬೆಳಗಾವಿಯಿಂದ ಅಂಜಲಿ ಲಿಂಬಾಳ್ಕರ್ ಆಕಾಂಕ್ಷಿಗಳು. ಚಿಕ್ಕೋಡಿಗೆ ಸತೀಶ್ ಜಾರಕಿಹೊಳಿ ಹೆಸರು ಅಂತಿಮಗೊಳಿಸಿದ್ದರೆ, ಹಾಸನ, ಕೊಪ್ಪಳಕ್ಕೆ ಸೂಕ್ತ ಅಭ್ಯರ್ಥಿಗಳು ಸಿಕ್ಕಿಲ್ಲ.

ದೆಹಲಿಯಲ್ಲಿ ಎಚ್ಡಿಕೆ, ವಿಜಯೇಂದ್ರ

ನವದೆಹಲಿ: ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ಬಿಜೆಪಿ ವರಿಷ್ಠರೊಂದಿಗೆ ರ್ಚಚಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೆಹಲಿಗೆ ಆಗಮಿಸಿದ್ದು, ಕೇಂದ್ರ ಸಚಿವ ಅಮಿತ್ ಷಾ ಸೇರಿ ವಿವಿಧ ನಾಯಕರನ್ನು ಗುರುವಾರ ಭೇಟಿ ಮಾಡಲಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಲಿದ್ದು, ದೇವೇಗೌಡರಿಗೆ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ. ಆದರೆ, ಸೀಟು ಹಂಚಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅಮಿತ್ ಷಾ ಜತೆ ಚರ್ಚೆ ನಡೆಯಬಹುದು. ಮೋದಿ ಜತೆ ಸೀಟು ಹಂಚಿಕೆ ಚರ್ಚೆ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ಲೋಕಸಭೆಗೆ 6 ಸೀಟುಗಳ ಮೇಲೆ ಕಣ್ಣಿಟ್ಟಿದ್ದರೂ, ಬಿಜೆಪಿ ಗರಿಷ್ಠ 2 ಸೀಟುಗಳನ್ನು ನೀಡಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪ್ರಧಾನಿ ಭೇಟಿ ಬಗ್ಗೆ ಮಾಹಿತಿ ಹಂಚಿಕೊಂಡ ಸಂಸದ ಪ್ರಜ್ವಲ್ ರೇವಣ್ಣ, ಸಭೆ ಅಜೆಂಡಾ ಬಗ್ಗೆ ಗೊತ್ತಿಲ್ಲ. ಹಾಸನಕ್ಕೆ ಸಂಬಂಧಪಟ್ಟ ಕೆಲ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ. ಜೆ.ಪಿ. ನಡ್ಡಾ ಜತೆಗಿನ ಸಭೆ ಬಗ್ಗೆಯೂ ತಿಳಿದಿಲ್ಲ ಎಂದರು.

ಪಟ್ಟಿಗೆ ಒಪ್ಪಿಗೆ ಸಾಧ್ಯತೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ದೆಹಲಿಗೆ ಬಂದಿದ್ದು, ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಹಿಂದಿನ ಭೇಟಿಯಲ್ಲಿ ಒಪ್ಪಿಗೆ ಪಡೆದುಕೊಳ್ಳಲು ಸಾಧ್ಯ ಆಗಿರಲಿಲ್ಲ. ಲೋಕಸಭೆ ಚುನಾ ವಣೆ ದೃಷ್ಟಿಯಿಂದ ಜವಾಬ್ದಾರಿಗಳನ್ನು ಹಂಚಲು ನೇಮಕ ಅಗತ್ಯವಾಗಿದೆ. ಲೋಕಸಭೆ ಚುನಾವಣೆಗೆ ತಯಾರಿ ಬಗ್ಗೆ ಸಭೆ ನಡೆಸಲು ಗುರುವಾರದಂದು ಜೆಪಿ ನಡ್ಡಾ ಎಲ್ಲ ರಾಜ್ಯಗಳ ಬಿಜೆಪಿ ಘಟಕಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ರಾಜ್ಯದ ವಿಚಾರಗಳ ಬಗ್ಗೆ ಪ್ರತ್ಯೇಕ ಸಭೆ ನಡೆಯುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net