ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ?: ಆರ್.ಆರ್. ನಗರ ಕ್ಷೇತ್ರಕ್ಕೆ ವರ್ಷದ ನಂತರ ಉಪಚುನಾವಣೆ

RR NAgat
Published on

ಬೆಂಗಳೂರು: ಬಿಬಿಎಂಪಿ ಚುನಾವಣೆ ಹೊಸ್ತಿಲಿನಲ್ಲೇ ರಾಜರಾಜೇಶ್ವರಿನಗರ ಉಪಚುನಾವಣೆ ಎದುರಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಮುನಿರತ್ನ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಉಪಚುನಾವಣೆ ಎದುರಾಗಿದ್ದು, ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ.

ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ ದಿಂದಾಗಿ ವಿಳಂಬವಾಗಿದ್ದ ಉಪಚುನಾವಣೆಗೆ ನ.3 ದಿನಾಂಕ ನಿಗದಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್​ಗೆ ನೇರ ಹಣಾಹಣಿ ಇದ್ದು, ಜೆಡಿಎಸ್ ಪೋಷಕ ಪಾತ್ರವಹಿಸಲಿದೆ ಎಂಬ ಮಾತು ಕೇಳಿಬರುತ್ತಿವೆ.

ಬಿಜೆಪಿ ಹಿಡಿತದಲ್ಲಿದ್ದ ಆರ್.ಆರ್.ನಗರ ಕ್ಷೇತ್ರವನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. 2018ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಿಂದಾಗಿ ಕ್ಷೇತ್ರ ತೆರವಾಗಿತ್ತು. ಸತತ ಒಂದು ವರ್ಷ ತೆರವಾಗಿದ್ದ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಸಲಾಗುತ್ತಿದೆ.

ವಿಳಂಬ: 2018ರ ಚುನಾವಣೆ ವೇಳೆ ಅಪಾರ್ಟ್​ವೆುಂಟ್ ಒಂದರಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದವು. ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದರು. ಇದರಿಂದ ಉಪಚುನಾವಣೆ ನಡೆಯುವುದು ತಡವಾಯಿತು.

ಬಿಜೆಪಿ ಹಿಡಿತ

ಬಿಬಿಎಂಪಿ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಹೆಚ್ಚಿನ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದ್ದು, ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ. ಹೀಗಾಗಿ ಉಪಚುನಾವಣೆಯ ಫಲಿತಾಂಶ ಮುಂದೆ ನಡೆಯಲಿರುವ ಬಿಬಿಎಂಪಿ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಅಹಿಂದ ಪ್ರಾಬಲ್ಯ

ಕ್ಷೇತ್ರದಲ್ಲಿ ಉಳಿದೆಲ್ಲ ಸಮುದಾಯಕ್ಕಿಂತ ಒಕ್ಕಲಿಗ ಮತದಾರರು ಹೆಚ್ಚಿದ್ದರೂ ಅಹಿಂದ ಮತಗಳ ಪ್ರಾಬಲ್ಯವಿದೆ. ಕುರುಬ, ಅಲ್ಪಸಂಖ್ಯಾತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲಗ್ಗೆರೆ, ಲಕ್ಷ್ಮೀದೇವಿನಗರ, ಯಶವಂತಪುರ ವಾರ್ಡ್ ಗಳಲ್ಲಿ ಕೊಳೆಗೇರಿಗಳು ಹೆಚ್ಚಿದ್ದು, ಅಲ್ಲಿನ ಮತದಾರರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.

ಕಾಂಗ್ರೆಸ್ ಪ್ರಾಬಲ್ಯ ಕುಸಿತ

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹಿಂದೆ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. 9 ವಾರ್ಡ್​ಗಳಿದ್ದು, 5ರಲ್ಲಿ ಕಾಂಗ್ರೆಸ್, ಬಿಜೆಪಿ 3 ಹಾಗೂ ಜೆಡಿಎಸ್ ಒಬ್ಬ ಕಾಪೋರೇಟರ್ ಹೊಂದಿತ್ತು. ಮುನಿರತ್ನ ಪಕ್ಷಾಂತರ ನಂತರ ಕಾಂಗ್ರೆಸ್ ಸದಸ್ಯರೂ ಬಿಜೆಪಿ ಸೇರಿದ್ದಾರೆ. ಜೆಡಿಎಸ್​ನ ಮಂಜುಳಾ ಕೂಡ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ.

ಅತಿದೊಡ್ಡ ಕ್ಷೇತ್ರ

ಬೆಂಗಳೂರಿನ ಮಟ್ಟಿಗೆ ರಾಜರಾಜೇಶ್ವರಿನಗರ ಅತಿದೊಡ್ಡ ಮತ್ತು ಹೆಚ್ಚು ಮತದಾರರಿರುವ ಕ್ಷೇತ್ರವಾಗಿದೆ. ಭೌಗೋಳಿಕವಾಗಿ ಯಶವಂತಪುರದಿಂದ ರಾಜರಾಜೇಶ್ವರಿನಗರದವರೆಗೆ ಕ್ಷೇತ್ರದ ವ್ಯಾಪ್ತಿಯಿದ್ದು, 4.60 ಲಕ್ಷ ಮತದಾರರಿದ್ದಾರೆ.

ಅಭ್ಯರ್ಥಿ ಆಯ್ಕೆಯೇ ಗೊಂದಲ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮುನಿರತ್ನಗೆ ಬಿಜೆಪಿ ಟಿಕೆಟ್ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ. ಆದರೆ, ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜುಗೌಡ ವಲಸಿಗ ಮುನಿರತ್ನ ಜತೆ ರಾಜಿಯಾಗಿಲ್ಲ. ಇದು ಬಿಜೆಪಿ ವರಿಷ್ಠರ ತಲೆನೋವಿಗೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಈ ಕ್ಷೇತ್ರದಲ್ಲಿ ಹೆಚ್ಚಿನ ಹಿಡಿತವಿಟ್ಟುಕೊಂಡಿದ್ದಾರೆ. ಹೀಗಾಗಿ ಅವರು ಆಯ್ಕೆ ಮಾಡುವ ಅಭ್ಯರ್ಥಿಯೇ ಅಂತಿಮ ಎನ್ನಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಗುರುವಾರ ಸಭೆ ನಡೆಯಲಿದೆ.

ಕೈ ಟಿಕೆಟ್​ಗೆ ಆಕಾಂಕ್ಷಿಗಳ ದುಂಬಾಲು

ಬೆಂಗಳೂರು: ರಾಜರಾಜೇಶ್ವರಿನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಕ್ಷೇತ್ರದ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಸಭೆ ನಡೆಸಲಿದ್ದಾರೆ. ಪಕ್ಷದ ಅಭ್ಯರ್ಥಿ ಆಯ್ಕೆ ಕುರಿತು ಪ್ರಥಮ ಸುತ್ತಿನ ಚರ್ಚೆ ನಡೆಸಲಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸುವರು. ಬಳಿಕ 2-3 ಹಂತದಲ್ಲಿ ಸಭೆ ನಡೆಸಿ ಅಭ್ಯರ್ಥಿ ಆಯ್ಕೆಮಾಡಿ ಪಟ್ಟಿಯನ್ನು ಎಐಸಿಸಿಗೆ ರವಾನಿಸಲಿದ್ದಾರೆ. ಟಿಕೆಟ್ ಕೋರಿ ಹಲವು ಅರ್ಜಿಗಳು ಬಂದಿವೆ. ಹೈಕಮಾಂಡ್ ಜತೆ ರ್ಚಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಅಚ್ಚರಿ ಅಭ್ಯರ್ಥಿ ಯಾರು ಎಂಬುದನ್ನ ಕಾದು ನೋಡಿ. ಈಗ ಯುದ್ಧಭೂಮಿ ಸಿದ್ಧವಾಗಿದೆ. ಸೂಕ್ತ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಮಾಡುತ್ತೇವೆ. ಬಳಿಕ ಪಕ್ಷದ ವರಿಷ್ಠರಿಗೆ ತಿಳಿಸುತ್ತೇವೆ. ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂಬುದು ನಮ್ಮ ಉದ್ದೇಶ. ಹನುಮಂತರಾಯಪ್ಪರನ್ನು ಕರೆತರುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಡಿ.ಕೆ. ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸುವ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮುನಿರತ್ನ ನಮಗೆ ವೈರಿಯಲ್ಲ, ಬಿಜೆಪಿಯಷ್ಟೇ ನಮ್ಮ ವೈರಿ. ಏನು ಬೇಕಾದರೂ ಆಗಬಹುದು ಎಂದು ತಿಳಿಸಿದ್ದಾರೆ.

ಚುನಾವಣೆ ನಿರೀಕ್ಷಿಸಿರಲಿಲ್ಲ

ಎರಡು ಕ್ಷೇತ್ರಗಳ ಉಪಚುನಾವಣೆ ಘೊಷಣೆ ಆಗಿದ್ದು, ಎದುರಿಸಲು ನಾವು ಸಿದ್ಧವಾಗಿದ್ದೇವೆ. ಶಿರಾದಲ್ಲಿ ಜಯಚಂದ್ರ ಅವರನ್ನು ಕಣಕ್ಕಿಳಿಸುತ್ತಿ ದ್ದೇವೆ. ರಾಜರಾಜೇಶ್ವರಿ ನಗರದಲ್ಲಿ ಅಭ್ಯರ್ಥಿ ಅಂತಿಮವಾಗಿಲ್ಲ. ಅಲ್ಲಿಯೂ ಪ್ರಬಲ ಅಭ್ಯರ್ಥಿ ಹಾಕುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆರ್.ಆರ್. ನಗರ ಕ್ಷೇತ್ರಕ್ಕೆ ಇಷ್ಟು ಬೇಗ ಚುನಾವಣೆ ಬರುತ್ತೆ ಅಂದುಕೊಂಡಿರಲಿಲ್ಲ. ಕಾಂಗ್ರೆಸ್​ಗೆ ಅಭ್ಯರ್ಥಿ ಕೊರತೆ ಇಲ್ಲ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ. ನಮಗೆ ಶಕ್ತಿ ಇದೆ, ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಎಲ್ಲ ಚುನಾವಣೆಗಳು ಎಲ್ಲ ಪಕ್ಷಗಳಿಗೆ ಪ್ರತಿಷ್ಠೆಯಾಗಿರುತ್ತದೆ. ಯಾವುದೇ ಒಂದು ಕ್ಷೇತ್ರದ ಚುನಾವಣೆ ಮಾತ್ರ ಪ್ರತಿಷ್ಠೆಯಾಗುವುದಿಲ್ಲ. | ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net