

ಶಿವಮೊಗ್ಗ: ರಾಜ್ಯ ಸರ್ಕಾರದ ಹಿಂದು ವಿರೋಧ ನೀತಿ ಹಾಗೂ 18 ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿರುವ ಸಂವಿಧಾನ ವಿರೋಧಿ ನಡೆ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಂವಿಧಾನವನ್ನು 76 ಬಾರಿ ತಿದ್ದುಪಡಿ ಮಾಡಿದ್ದ ಕಾಂಗ್ರೆಸ್ ಮುಸ್ಲಿಂರ ಓಲೈಕೆಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿತ್ತು. ಸ್ವಾತಂತ್ರೃ ಸಂದರ್ಭದಲ್ಲಿ ದೇಶ ಇಬ್ಭಾಗ ಮಾಡಿದ್ದ ಕಾಂಗ್ರೆಸ್, ಈಗ ಮುಸ್ಲಿಂ ತುಷ್ಟೀಕರಣ ಬಜೆಟ್ ಮೂಲಕ ಊರುಗಳನ್ನೇ ಒಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೆ ಸಂವಿಧಾನವನ್ನು 106 ಬಾರಿ ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಅವಧಿಯದ್ದೇ ಸಿಂಹಪಾಲು. ಹಿಂದುಗಳು ಹಾಗೂ ಮುಸ್ಲಿಮರು ಒಂದಾಗಿ ಬಾಳಲು ಕಾಂಗ್ರೆಸ್ ಬಿಡುತ್ತಿಲ್ಲ. ಈಗಾಗಲೇ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಮತ್ತೆ ಅವರಿಗೆ ಶೇ. 4 ಮೀಸಲಾತಿ ನೀಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಸಾಧನೆಗಳ ಆಧಾರದ ಮೇಲೆ ಮತ ಕೇಳುವ ಯೋಗ್ಯತೆ ಕಾಂಗ್ರೆಸ್‌ನವರಿಗಿಲ್ಲ. ಗ್ಯಾರಂಟಿ ಯೋಜನೆಗಳನ್ನು ತೋರಿಸಿ ಮತಯಾಚಿಸುತ್ತಿದ್ದಾರೆ. ಕನ್ನಡ ಹೋರಾಟಗಾರರು, ವಿಚಾರವಾದಿಗಳು, ಬುದ್ಧಿಜೀವಿಗಳು ಎನಿಸಿಕೊಂಡವರು ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಪ್ರತಿಭಟನೆ ಮಾಡುತ್ತಾರೆ. ಆದರೆ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣದ ಬಗ್ಗೆ ಮಾತನಾಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಶಾಸಕ ಎಸ್.ಎನ್.ಚನ್ನಬಸಪ್ಪ. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ಪ್ರಮುಖರಾದ ಎಸ್.ಜ್ಞಾನೇಶ್ವರ್, ಎಸ್.ದತ್ತಾತ್ರಿ, ಡಾ. ರವೀಂದ್ರ, ಟಿ.ಡಿ.ಮೇಘರಾಜ್, ಹರಿಕೃಷ್ಣ, ಮೋಹನ್ ರೆಡ್ಡಿ, ಕೆ.ವಿ.ಅಣ್ಣಪ್ಪ, ಸಿ.ಎಚ್.ಮಾಲತೇಶ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ, ಶಾಂತಾ ಸುರೇಂದ್ರ ಇತರರಿದ್ದರು.
ಎಎ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಬಾಲರಾಜ ಅರಸ್ ರಸ್ತೆಯಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಗುರುದತ್ತ ಹೆಗಡೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.