ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ

c.n. balakrishna mla
Published on

ಚನ್ನರಾಯಪಟ್ಟಣ: ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಗಾಗಿ ನಡೆಯುತ್ತಿದ್ದ ನೋಂದಣಿಯಲ್ಲಿ ತಾವಾಗಲಿ, ತಮ್ಮ ಸಹೋದರ ಫೆಡರೇಷನ್ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡರಾಗಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದ್ದಾರೆ.


ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಕಾರ್ಯವು ಅತ್ಯಂತ ಪಾರದರ್ಶಕವಾಗಿ ನಡೆಯಬೇಕೆಂದು ನೋಂದಣಿ ಆರಂಭದ ದಿನವೇ ತಿಳಿಸಲಾಗಿತ್ತು. ತಾಲೂಕಿನಲ್ಲಿ ಅತಿಹೆಚ್ಚು ಕೊಬ್ಬರಿ ಬೆಳೆಗಾರರಿದ್ದು, ನೋಂದಣಿಗೆ ನಿಗದಿಪಡಿಸಲಾಗಿದ್ದ ಪ್ರಮಾಣದ ಗುರಿ ಮುಗಿದಿರುವ ಹಿನ್ನೆಲೆಯಲ್ಲಿ ನೋಂದಣಿ ಸ್ಥಗಿತವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕಳೆದ ಬಾರಿ ಮೂರು ಇದ್ದ ನೋಂದಣಿ ಕೇಂದ್ರವನ್ನು 5ಕ್ಕೆ ಏರಿಸಲಾಗಿತ್ತು ಮತ್ತು ಪಟ್ಟಣದ ಕೇಂದ್ರದಲ್ಲಿ ಹೆಚ್ಚುವರಿಯಾಗಿ 2 ಕಂಪ್ಯೂಟರ್ ಅಳವಡಿಕೆ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಮಾಹಿತಿ ಕೊರತೆಯಿಂದಾಗಿ ಕಾಂಗ್ರೆಸ್ಸಿಗರು ಸಹೋದರ ಮೇಲೆ ಆರೋಪ ಮಾಡಿರುವುದು ತರವಲ್ಲ, ಮುಖಂಡ ಎಂ.ಕೆ.ಮಂಜೇಗೌಡ ವೈಯಕ್ತಿಕವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.


62,500 ಮೆಟ್ರಿಕ್ ಟನ್‌ಗೆ ಸೀಮಿತವಾಗಿದ್ದ ಖರೀದಿ ಪ್ರಮಾಣವನ್ನು ಹೆಚ್ಚು ಮಾಡುವಂತೆ ಮಾಜಿ ಪ್ರಧಾನಿ ದೇವೇಗೌಡರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದು, ಅವರು ಕೇಂದ್ರ ಸಚಿವರ ಜತೆ ಮಾತನಾಡಲಿದ್ದಾರೆ. ಸಂಸದ ಪ್ರಜ್ವಲ್ ಈ ಕುರಿತಾಗಿ ಕೃಷಿ ಸಚಿವ ಅಜಿತ್‌ಮುಂಡಾ ಮತ್ತು ಶೋಭಾ ಕರಂದಾಜ್ಲೆಗೆ ಮನವಿ ಸಲ್ಲಿಸಿದ್ದಾರೆ ಎಂದರು.


ಫೆಡರೇಷನ್ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಮುಖಂಡರಾದ ಪರಮದೇವರಾಜೇಗೌಡ, ಮೂಡನಹಳ್ಳಿ ಚಂದ್ರಣ್ಣ, ಸಿಟಿ ಅಶೋಕ್, ಫೆಡರೇಷನ್ ಅಧಿಕಾರಿ ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net