ಸಾರ್ವಜನಿಕ ಕೆಲಸಗಳಿಗೆ ಕಾಂಗ್ರೆಸ್ ಏಜೆಂಟರು ಅಡ್ಡಿ

28hly01
Published on

ಹಳಿಯಾಳ: ಇಲ್ಲಿನ ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪುರಸಭೆ, ಪಿಡಬ್ಲ್ಯೂಡಿ ಕಚೇರಿಗಳಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರು ಇದ್ದಾರೆ. ಹೀಗಾಗಿ, ಸಾರ್ವಜನಿಕ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಇದನ್ನು ನಿಯಂತ್ರಿಸಲು ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ವಿಫಲರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಗಂಭೀರ ಆರೋಪ ಮಾಡಿದರು.

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕೆಲವು ದಿನಗಳ ಹಿಂದಷ್ಟೇ ಶಾಸಕ ಆರ್‌ವಿಡಿ ಅವರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಒಬ್ಬ ರೈತ ಅಧಿಕಾರಿಗಳಿಗೆ ಕೊಟ್ಟ 5000 ರೂಪಾಯಿಗಳನ್ನು ರೈತನಿಗೆ ವಾಪಸ್ ಕೊಡಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿ ಬಂತು. ಇದೆಲ್ಲ ನಾಟಕ. ಶಾಸಕರು ಎಲ್ಲ ಅಧಿಕಾರಿಗಳನ್ನು ಮನೆಗೆ ಕರೆಯಿಸಿ ಹೇಳುವುದೇ ಬೇರೆ, ಇಲ್ಲಿ ಅಸಲಿಗೆ ಆಗುತ್ತಿರುವುದೇ ಬೇರೆ ಎಂದು ಆರೋಪಿಸಿದರು. ಹಳಿಯಾಳದ ಹಲವು ಇಲಾಖೆ ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳ ಮೇಲೆ ಶಾಸಕರಿಗೆ ಹಿಡಿತವಿಲ್ಲ. ಶಾಸಕರು ಬರೀ ನಾಟಕ ಮಾಡುತ್ತಾರೆ. ಕೆಡಿಪಿ ಸಭೆಯಲ್ಲಿಯೂ ನಾಟಕ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕುಗಳನ್ನು ಕೂಡಲೇ ಸರ್ಕಾರ ಬರ ಪೀಡಿತ ತಾಲೂಕುಗಳು ಎಂದು ೋಷಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ತಂದಂತಹ ಕಿಸಾನ್ ಸಮ್ಮಾನ್ ಯೋಜನೆ, ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾ ನಿಧಿ ಯೋಜನೆ, ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸುವ ಯೋಜನೆಯನ್ನು ಕೂಡಲೇ ಮರು ಜಾರಿಗೆ ಮಾಡಬೇಕೆಂದು ಒತ್ತಾಯಿಸಿದರು.

ಅದೇ ರೀತಿ ಹಿಂದಿನ ಬಿಜೆಪಿ ಸರ್ಕಾರ ಪ್ರತಿ ಟನ್ ಕಬ್ಬಿಗೆ ೋಷಿಸಿದ ಬೆಂಬಲ ಬೆಲೆಯನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸ್ವತಃ ರೈತರ ಹೊಲಗಳಿಗೆ ತೆರಳಿ ಕಬ್ಬು ಕಟಾವು ಮಾಡಿಕೊಂಡು ಹೋಗಿ ಯಾವುದೇ ವೆಚ್ಚವನ್ನು ರೈತರ ಮೇಲೆ ಹೇರಬಾರದು ಎಂದು ಆಗ್ರಹಿಸಿದರು.

ತಾಲೂಕಿನಲ್ಲಿ ಬೆಳೆದ ಕಬ್ಬನ್ನು ಮೊದಲು ಕಟಾವು ಮಾಡಿ ನುರಿಸಿದ ನಂತರವೇ ಬೇರೆ ತಾಲೂಕಿಗೆ ಆದ್ಯತೆ ನೀಡಬೇಕು. ರೈತರಿಗೆ ಕಾಡು ಪ್ರಾಣಿಗಳಾದ ಆನೆ, ಮಂಗ ಹಾಗೂ ಹಂದಿಗಳಿಂದ ಆಗುತ್ತಿರುವ ಹಾನಿಯನ್ನು ನಿಯಂತ್ರಿಸುವ ಹಾಗೂ ಬೆಳೆ ಹಾನಿ ಪರಿಹಾರ ನೀಡುವುದರ ಬಗ್ಗೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಗಣಪತಿ ಕರಂಜೇಕರ, ಜಿಲ್ಲಾ ಬಿಜೆಪಿ ಪ್ರಮುಖರಾದ ಮಂಗೇಶ ದೇಶಪಾಂಡೆ, ಜೊಯಿಡಾ ಬಿಜೆಪಿ ಅಧ್ಯಕ್ಷ ಸಂತೋಷ ರೇಡಕರ, ಬಸಣ್ಣ ಕುರುಬಗಟ್ಟಿ, ಸಂತೋಷ ಘಟಕಾಂಬಳೆ, ವಿಲಾಸ ಯಡವಿ, ಚಂದ್ರಕಾಂತ ಕಮ್ಮಾರ, ರತ್ನಮಾಲಾ ಮುಳೆ, ಸಂಗೀತಾ ಜಾವಳೆಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net