

ತುಮಕೂರು : ಸಂಸತ್ ಚುನಾವಣೆಯಲ್ಲಿ ಮೈತ್ರಿ ಹೆಸರಲ್ಲಿ ಕ್ಷೇತ್ರ ಕಳೆದುಕೊಂಡಿದ್ದು, ಮುಖಂಡರ ಪರಸ್ಪರ ಕೆಸರೆರಚಾಟ, ಶಿರಾ ಉಪಚುನಾವಣೆ ಸೋಲು, ಯುವ ನಾಯಕತ್ವದ ಕೊರತೆ ಮತ್ತಿತರ ವಿಷಯದ ಕಾರಣಕ್ಕೆ ಜಿಲ್ಲೆಯಲ್ಲಿ ಸೊರಗಿದಂತೆ ಕಾಣುತ್ತಿರುವ ಕಾಂಗ್ರೆಸ್‌ಗೆ ಶನಿವಾರ ಜಿಲ್ಲೆಗೆ ಆಗಮಿಸುತ್ತಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಶಕ್ತಿ ನೀಡುವರೇ ಎಂಬ ಕುತೂಹಲವಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಸುರ್ಜೇವಾಲ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಜಿಲ್ಲೆಯ ಎಲ್ಲ ಪ್ರಮುಖರ ಸಭೆ ನಡೆಸಲಿದ್ದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವ ಕಾಂಗ್ರೆಸ್‌ನಲ್ಲಿ ಮೂಡಿರುವ ಒಡಕು ಸರಿಪಡಿಸಬೇಕು ಎಂಬ ಬಯಕೆ ಕಾರ್ಯಕರ್ತರ ವಲಯದಲ್ಲಿದೆ. ಆದರೆ, ಮುಖಂಡರ ಆಸೆ ಮುಗುಮ್ಮಾಗಿದೆ. ಐದು ಜಿಲ್ಲೆಗಳ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು ಹಾಗೂ ಪಕ್ಷದ ಪದಾಧಿಕಾರಿಗಳ ಜತೆ ಸುರ್ಜೇವಾಲ ಮಾತುಕತೆ ನಡೆಸಲಿದ್ದು, ತುಮಕೂರು ಜಿಲ್ಲೆಯಲ್ಲಿ ಒಡೆದ ಮನೆಯಂತಾಗಿರುವ ಕಾಂಗ್ರೆಸ್ ನಾಯಕರು ಪರಸ್ಪರ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಶಿರಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಸುರ್ಜೇವಾಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದ ವಿಡಿಯೋ ಕೂಡ ಆ ಸಂದರ್ಭದಲ್ಲಿ ವೈರಲ್ ಆಗಿತ್ತು, ಸುರ್ಜೇವಾಲ ಸಲಹೆ ತಿರಸ್ಕರಿಸಿ ಚುನಾವಣೆ ೋಷಣೆಗೂ ಮೊದಲೇ ಅಭ್ಯರ್ಥಿ ೋಷಿಸಿದ್ದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಬಹುದು ಎನ್ನಲಾಗಿದೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆ, ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಕ್ಷೇತ್ರಗಳಲ್ಲಿ ಜವಾಬ್ದಾರಿ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ, ಕಾಂಗ್ರೆಸ್ ಜತೆ ಮುನಿಸಿಕೊಂಡಿರುವ ಮಾಜಿ ಸಂಸದ ಎಸ್‌ಪಿಎಂ ಮನವೊಲಿಕೆ ಮತ್ತಿತರ ಮಹತ್ವದ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಯಿದೆ. ಸಭೆಯ ಬಗ್ಗೆ ಮಾಹಿತಿ ನೀಡಲು ಬುಧವಾರ ಮುಖಂಡರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿಯೂ ಮುಖಂಡರ ನಡುವಿನ ಅಸಮಾಧಾನ ಬಯಲಾಗಿತ್ತು. ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರನ್ನು ಕೊನೆಯಲ್ಲಿ ಕೂರಿಸಲಾಗಿತ್ತು, ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್ ವೇದಿಕೆಗೇರದೆ ಅಂತರ ಕಾಯ್ದುಕೊಂಡಿದ್ದು, ಹಾಲಿ ಶಾಸಕ ಡಾ.ಎಚ್.ಡಿ.ರಂಗನಾಥ್‌ಗೆ ಮಾತನಾಡಲು ಅವಕಾಶ ನೀಡದಿದ್ದುದು ಪಕ್ಷದೊಳಗಿನ ಮುಸುಕಿನ ಗುದ್ದಾಟದ ಲಕ್ಷಣವಾಗಿತ್ತು.
ನೆಲಮಂಗಲದ ಕಡೆ ಹೊರಟ ಪರಮೇಶ್ವರ: ಮುಖ್ಯಮಂತ್ರಿ ರೇಸ್‌ನಲ್ಲಿರುವ ಡಾ.ಜಿ.ಪರಮೇಶ್ವರ ಕ್ಷೇತ್ರ ಬದಲಾಯಿಸಬಹುದು ಎಂಬ ವದಂತಿ ಕೇಳಿಬರುತ್ತಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣ ರಾಜಕೀಯದ ಕಾವು ಹೆಚ್ಚಾದರೆ ಹೈಕಮಾಂಡ್ ಆಯ್ಕೆಯಾಗಲಿರುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಪರಮೇಶ್ವರ 2013ರಂತೆ ಚುನಾವಣೆಯಲ್ಲಿ ಸೋಲದಂತೆ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ. ಕೊರಟಗೆರೆಯಲ್ಲಿ ಹೆಚ್ಚು ಓಡಾಟ ನಡೆಸುತ್ತಿದ್ದಾರೆಯಾದರೂ ಕ್ಷೇತ್ರ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎನ್ನುತ್ತಿದೆ ಆಪ್ತವಲಯ. ಪರಮೇಶ್ವರ ಬೆಂಗಳೂರಿನ ಪುಲಿಕೇಶಿನಗರ ಅಥವಾ ನೆಲಮಂಗಲದ ಮೇಲೆ ಆಸೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಪುಲಕೇಶಿ ನಗರದಲ್ಲಿ ಸಿದ್ದರಾಮಯ್ಯ ಆಪ್ತ ಅಖಂಡ ಶ್ರೀನಿವಾಸಮೂರ್ತಿ ಇರುವ ಕಾರಣಕ್ಕೆ ನೆಲಮಂಗಲದ ಮೇಲೆ ಹೆಚ್ಚು ಒಲವಿರಬಹುದು. ಇದಕ್ಕೆ ಪುಷ್ಟಿ ನೀಡುವಂತೆ ನೆಲಮಂಗಲದಲ್ಲಿ ವರ್ಚಸ್ಸು ಹೊಂದಿರುವ ಜೆಡಿಎಸ್ ಎಂಎಲ್‌ಸಿ ಬಿಎಂಎಲ್ ಕಾಂತರಾಜು ಅವರನ್ನು ಪಕ್ಷಕ್ಕೆ ಕರೆತಂದು ತುರುವೇಕೆರೆಯಿಂದ ಕಣಕ್ಕಿಳಿಸಲು ವಿಶೇಷ ಆಸಕ್ತಿ ವಹಿಸಿದ್ದಾರೆ. ಇತ್ತೀಚೆಗೆ ತುರುವೇಕೆರೆಗೆ ತೆರಳಿ ಮುಖಂಡರ ಸಭೆ ನಡೆಸಿರುವುದು ಇದರ ಒಂದು ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ. ನೆಲಮಂಗಲ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಡಾ.ಪರಮೇಶ್ವರ ಅಲ್ಲಿಂದ ಸ್ಫರ್ಧೆಗೆ ಒಲವು ತೋರಿಸಿದ್ದರೂ ಆಶ್ಚರ್ಯಪಡುವಂತಿಲ್ಲ ಎನ್ನುತ್ತಿವೆ ಕಾಂಗ್ರೆಸ್ ಪಾಳಯ.
ಮುದ್ದಹನುಮೇಗೌಡ ಹಾಜರಾಗ್ತಾರಾ? : ಮೈತ್ರಿ ಹೆಸರು ಹೇಳಿಕೊಂಡು ಸಂಸತ್ ಚುನಾವಣೆಯಲ್ಲಿ ಸ್ಫರ್ಧಿಸುವ ಅವಕಾಶ ಕಸಿದುಕೊಂಡ ಕಾರಣಕ್ಕೆ ಕಾಂಗ್ರೆಸ್ ಜಿಲ್ಲಾ ಮುಖಂಡರ ಜತೆ ಅಂತರ ಕಾಯ್ದುಕೊಂಡಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಶನಿವಾರದ ಮಹತ್ವದ ಸಭೆಗೆ ಹಾಜರಾಗುತ್ತಾರಾ ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಮೂಡಿದೆ. ಉದ್ದೇಶ ಪೂರ್ವಕವಾಗಿಯೇ ಟಿಕೆಟ್ ತಪ್ಪಿಸಿ ಮುದ್ದಹನುಮೇಗೌಡ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದು ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೆಮ್ಮದಿ ಕೆಡಿಸಿದೆ ಎನ್ನಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಕುಣಿಗಲ್ ಟಿಕೆಟ್ ಷರತ್ತು ಹಾಕಿರುವ ಎಸ್‌ಪಿಎಂ, ರಾಜಕೀಯ ತಂತ್ರಗಾರಿಕೆಗೆ ಸುಸ್ತಾಗಿರುವ ಕಾಂಗ್ರೆಸ್ ಮುಖಂಡರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ರಾಜಕೀಯ ಪಕ್ಷಗಳಲ್ಲಿಯೂ ಇದೆ. ಕೇಂದ್ರ ನಾಯಕ ಜಿಲ್ಲೆಗೆ ಆಗಮಿಸುವ ಶನಿವಾರದ ಪ್ರಮುಖ ಸಭೆಗೂ ಎಸ್‌ಪಿಎಂ ಗೈರಾದರೆ ರಾಜಕೀಯ ಲೆಕ್ಕಾಚಾರಗಳು ಬದಲಾಗಿರುವ ಸಾಧ್ಯತೆ ದಟ್ಟವಾಗಲಿದೆ.