

ಕನಕಗಿರಿ: ಹಲವು ದಶಕಗಳ ಹೋರಾಟದ ಫಲವಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ನೀಡಿದ 371 (ಜೆ) ಮೀಸಲಾತಿ ಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರು ಹಲವು ಉನ್ನತ ಹುದ್ದೆ ಹಿಡಿಯಲು ಸಹಕಾರಿಯಾಗಿದೆ ಎಂದು ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ನವಲಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಂಗಾಮತ ಸಮಾಜದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು. ಸದ್ಯ ಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಪರಿಶ್ರಮದಿಂದ 371 (ಜೆ) ಜಾರಿಯಾಯಿತು.
ಇದು ಈ ಭಾಗದ 7 ಜಿಲ್ಲೆಗಳ ಜನರ ಶಿಕ್ಷಣ, ಉದ್ಯೋಗಕ್ಕೆ ಸಹಕಾರಿಯಾಗಿದೆ. ಇದರಿಂದ ಹಲವರು ಪಿಎಸ್‌ಐ, ಎಸಿ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕಾರಣಿಗಳಾದವರು ಇಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತಮ್ಮನ್ನು ಗೆಲ್ಲಿಸಿದ ಜನರ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕು ಎಂದರು.
ಗಂಗಾಮತ ಸಮಾಜದ ಮುಖಂಡ ತಿಪ್ಪಣ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಗಂಗಾಮತ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಸಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಗಂಗಾಮತ ಸೇರಿದಂತೆ ಅದರ ಉಪ ಪಂಗಡಳಾದ ಕೋಲಿ, ಬೆಸ್ತ, ಅಂಬಿಗ ಇತರ ಸಮುದಾಯಗಳ ಅಭ್ಯುದಯಕ್ಕೆ ಡಬಲ್ ಇಂಜಿನ್ ಸರ್ಕಾರಗಳು ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖರಾದ ವಿಶ್ವನಾಥರಡ್ಡಿ, ಟಿಜೆ ರಾಮಚಂದ್ರ, ರಮೇಶ ನಾಯಕ, ವಿರುಪಣ್ಣ ಕಲ್ಲೂರು, ಸಿದ್ದಪ್ಪ ನಿರ್ಲೂಟಿ, ರೆಡ್ಡಿ ಶ್ರೀನಿವಾಸ, ಅಮರೇಶ ಗೋನಾಳ, ಗಂಗಾಧರ ಗಂಗಾಮತ ಇತರರಿದ್ದರು.