ಗೋಡ್ಸೆ ಪೂಜೆ ದುರಂತ: ಮಾಜಿ ಮುಖ್ಯ ಮಂತ್ರಿ ಡಾ. ಎಂ.ವೀರಪ್ಪ ಮೊಯಿಲಿ

padayatre
Published on

ಹೆಬ್ರಿ: ಅಂದು ಬ್ರಿಟಿಷರು ಒಡೆದು ಆಳಿದ ನೀತಿಯನ್ನೇ ಅವರ ಉತ್ತರಾಧಿಕಾರಿಗಳಾದ ಬಿಜೆಪಿಯವರು ಮುಂದುವರಿಸಿದ್ದಾರೆ. ಸಮಗ್ರ ಭಾರತವನ್ನು ಒಡೆದದ್ದು ಅಂದಿನ ಹಿಂದು ಮಹಾಸಭಾ, ಈಗ ದೇಶ ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ನೀತಿ ಹೇಳುತ್ತಾರೆ. ಮಹಾತ್ಮ ಗಾಂಧಿಯವರನ್ನು ಕೊಂದ ಗೋಡ್ಸೆಯನ್ನು ಬಿಜೆಪಿ ಮತ್ತವರ ತಂಡದವರು ಪೂಜಿಸುತ್ತಿರುವುದು ದುರಂತ. ಪೆಟ್ರೋಲ್ ಸಹಿತ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಬದುಕುವ ಸ್ಥಿತಿ ಇಲ್ಲ. ಬಿಜೆಪಿಯವರಿಗೆ ಜನರ ಕಷ್ಟವೇ ಅರ್ಥವೇ ಆಗುತ್ತಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಡಾ. ಎಂ.ವೀರಪ್ಪ ಮೊಯಿಲಿ ಟೀಕಿಸಿದರು.

ಶನಿವಾರ ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಬೃಹತ್ ಕಾಲ್ನಡಿಗೆ ಜಾಥಾದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲರಿಗೂ ಪರಿಹಾರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋಮು ದ್ವೇಷದ ಹತ್ಯೆಗಳು ನಡೆಯುತ್ತಿವೆ. ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಬೆಂಬಲಿಗರಿಂದ ಹತ್ಯೆಯಾದ ಕೊಕ್ಕರ್ಣೆ ಪ್ರವೀಣ್ ಪೂಜಾರಿ, ಸಾಲಿಗ್ರಾಮದ ಅವಳಿ ಕೊಲೆ ಪ್ರಕರಣದ ಸಂತ್ರಸ್ತರ ಮನೆಗೂ ಸೂಕ್ತ ಪರಿಹಾರ ನೀಡಿ ಎಂದು ವಿನಯ ಕುಮಾರ್ ಸೊರಕೆ ಒತ್ತಾಯಿಸಿದರು.

ಹೆಬ್ರಿ ತಾಲೂಕು ಕಚೇರಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ತನಕ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರೊೃೀತ್ಸವದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಡಾ.ವೀರಪ್ಪ ಮೊಯ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಗೌರವಾರ್ಪಣೆ, ಹೆಬ್ರಿ ಪೇಟೆಯಲ್ಲಿ ಹುತಾತ್ಮ ಯೋಧ ನಾಡ್ಪಾಲು ಉದಯ ಪೂಜಾರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಂಗಳೂರು ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಪ್ರಮುಖರಾದ ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಪ್ರವೀಣ್ ಬಲ್ಲಾಳ್, ಬಿಪಿನ್ ಚಂದ್ರಪಾಲ್ ನಕ್ರೆ, ಸದಾಶಿವ ದೇವಾಡಿಗ, ದೀಪಾ ಭಂಡಾರಿ ಹೆಬ್ರಿ, ಸುಧಾಕರ ಕೋಟ್ಯಾನ್, ಸುರೇಂದ್ರ ಶೆಟ್ಟಿ, ಹುತ್ತುರ್ಕೆ ದಿನೇಶ ಶೆಟ್ಟಿ, ರಂಜಿನಿ ಹೆಬ್ಬಾರ್ ಕಬ್ಬಿನಾಲೆ ಉಪಸ್ಥಿತರಿದ್ದರು.ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರಕಾಶ ಪೂಜಾರಿ ಮತ್ತು ಚೈತ್ರ ಕಬ್ಬಿನಾಲೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net