ಕಾಂಗ್ರೆಸ್ ಟಿಕೆಟ್ ಯಾರಿಗೆ ಕೊಡೋಣ, ಯಾರ ಕೈ ಬಿಡೋಣ? ರಾಹುಲ್ ಗಾಂಧಿ ಸಮಾವೇಶ ಕುರಿತ ಪೂರ್ವಭಾವಿ ಸಭೆ

IMG-20230316-WA0019.jpg
Published on

ಬೆಳಗಾವಿ : ರಾಜ್ಯದಲ್ಲಿ‌ ಈ ಬಾರಿ ಸರ್ಕಾರ ರಚಿಸಲು ಇನ್ನಿಲ್ಲದ ಪ್ರಯತ್ನ‌ ಮಾಡುತ್ತಿರುವ ಕಾಂಗ್ರೆಸ್ ನ ವಿಧಾನಸಭೆ ಚುನಾವಣೆಯ ಅಧಿಕೃತ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಸನ್ನಿಹಿತವಾಗುತ್ತಿದ್ದಂತೆಯೇ ನಾಯಕರು ಮೇಲಿಂದ ಮೇಲೆ ಸಭೆ ನಡೆಸುವ ಮೂಲಕ ಗೆಲ್ಲುವ ಅಭ್ಯರ್ಥಿಗಳು ಹಾಗೂ ಬಂಡಾಯ ಉದ್ಬವಿಸದಂತೆ ಮೊದಲ ಪಟ್ಟಿಯಲ್ಲೇ ಸಾಣೆ ಹಿಡಿಯುವ ತಂತ್ರ ಅನುಸರಿಸುತ್ತಿದ್ದಾರೆ.

ಮೊದಲ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್ ಘೋಷಿಸಬೇಕು, ಘೋಷಣೆಯಿಂದ ಆಗುವ ಲಾಭ, ನಷ್ಟದ ಕುರಿತು ಹಾಗೂ ಮಾ.೨೦ಕ್ಕೆ ರಾಹುಲ್ ಗಾಂಧಿ ಅವರ ಸಮಾವೇಶದ ರೂಪರೇಷಗಳ ಕುರಿತು ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ರಾಜ್ಯ ನಾಯಕರು ಸಭೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಯುವರಾಜ ರಾಹಲ್ ಗಾಂಧಿ ಅವರ ನೇತೃತ್ವದಲ್ಲಿ ಪವರ್ ಸೆಂಟರ್ ಬೆಳಗಾವಿಯಲ್ಲಿ ಲಕ್ಷಾಂತರ ಜನರ ಸೇರಿಸಿ ಸಮಾವೇಶ ನಡೆಸಲು ಭರ್ಜರಿ ತಯಾರಿ ನಡೆಸಿದೆ. ಅಲ್ಲದೇ, ಕಿತ್ತೂರು ಕರ್ನಾಟಕದ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿಯೂ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.‌

ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಲೀಂ‌ ಅಹ್ಮದ್, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಶಾಸಕರಾದ ಲಕ್ಷ್ಮೀಹೆಬ್ಬಾಳ್ಕರ್, ಪ್ರಸಾದ್ ಅಬ್ಬಯ್ಯ, ಎಚ್.ವೈ.ಮೇಟಿ, ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net