ಅಕ್ಕಿ ಕೊಡಲು ಕೇಂದ್ರ ಸರ್ಕಾರದ ರಾಜಕೀಯ: ನಗರದಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ

1 (3)
Published on

ಮಂಡ್ಯ: ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ವಿತರಣೆ ಮಾಡಲು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲು ತೀರ್ಮಾನ ಕೈಗೊಂಡಿರುವುದನ್ನು ಸಹಿಸದೆ ಕೇಂದ್ರ ಸರ್ಕಾರ ಬಡವರಿಗೆ ವಿತರಿಸುವ ಅಕ್ಕಿಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರಾಡಳಿತ ನಡೆಸಿದ ಬಿಜೆಪಿಯನ್ನು ಸೋಲಿಸುವ ಮೂಲಕ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಅಂತೆಯೇ ಕಾಂಗ್ರೆಸ್ ನೀಡಿದ ಭರವಸೆ ನೀಡಿರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಬಿಜೆಪಿ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದರು. ಕ್ಷೀರ ಭಾಗ್ಯ, ಆಶ್ರಯ ಮನೆ, ಪಿಂಚಣಿ, ಕೃಷಿ ಭಾಗ್ಯ ಎಲ್ಲ ಭಾಗ್ಯಗಳನ್ನೂ ನಿಲ್ಲಿಸಿದ್ದರು. ಮಾತ್ರವಲ್ಲದೆ 2 ಲಕ್ಷ ಕೋಟಿ ರೂ ಇದ್ದ ಸಾಲವನ್ನು ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ 5 ಲಕ್ಷ ಕೋಟಿ ರೂಗೆ ಹೆಚ್ಚಳ ಮಾಡಿತ್ತು. ಇದರೊಂದಿಗೆ ರಾಜ್ಯವನ್ನು 3 ಲಕ್ಷ ಕೋಟಿ ರೂ ಸಾಲ ಸುಳಿಗೆ ತಳ್ಳಿದ್ದರು ಎಂದು ಕಿಡಿಕಾರಿದರು.

ಒಂದು ಕಡೆ ಸಾಲ ಮಾಡಿದ್ದರು, ಮತ್ತೊಂದು ಕಡೆ ಅಭಿವೃದ್ಧಿ ನಿಲ್ಲಿಸಿದ್ದರು. ಆದರೆ ನಾವು ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ಜನರಿಗೆ ಕೊಟ್ಟ ಐದೂ ಭರವಸೆಗಳನ್ನು ಈಡೇರಿಸಿದ್ದೇವೆ. 56 ಸಾವಿರ ಕೋಟಿ ರೂಗಳ ಯೋಜನೆಗೆ ಒಂದೇ ದಿನದಲ್ಲಿ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಅದನ್ನು ಜಾರಿಗೊಳಿಸಿದ್ದೇವೆ. ಇದನ್ನು ಸಹಿಸದ ಕೇಂದ್ರದ ಬಿಜೆಪಿ ಸರ್ಕಾರ ಬಡವರಿಗೆ ಅಕ್ಕಿ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಇಷ್ಟೆಕ್ಕೇ ನಾವೇನು ಸುಮ್ಮನಿಲ್ಲ. ಬೇರೆ ಬೇರೆ ರಾಜ್ಯಗಳನ್ನು ಸಂಪರ್ಕಿಸಿ ಎಲ್ಲೆಲ್ಲಿ ಎಷ್ಟುಷ್ಟು ಅಕ್ಕಿ ಸಿಗುತ್ತದೋ ಅಲ್ಲಿ ಅಕ್ಕಿ ಪಡೆದು ಬಡವರಿಗೆ ವಿತರಿಸುವ ಕೆಲಸವನ್ನು ಮಾಡುತ್ತೇವೆ. ಇದರ ಭಾಗವಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಎಲ್ಲ ಜನಪ್ರತಿನಿಧಿಗಳು, ಮಂತ್ರಿಗಳು, ಶಾಸಕರು, ಕಾರ್ಯಕರ್ತರೊಟ್ಟಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಇನ್ನಾದರೂ ಬಡವರಿಗೆ ಕೊಡುವ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡದೆ ಆಹಾರ ನಿಗಮದಲ್ಲಿರುವ ಅಕ್ಕಿಯನ್ನು ತಕ್ಷಣ ರಾಜ್ಯ ಸರ್ಕಾರಕ್ಕೆ ರವಾನಿಸಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ನಿರ್ಧಾರದಿಂದ ಗೊಂದಲ ಉಂಟಾಗುತ್ತದೆ. ಕೇಂದ್ರ ಸರ್ಕಾರ ಮಾಡುತ್ತಿರುವ ದ್ರೋಹ ಜನರಿಗೆ ತಿಳಿಯುತ್ತಿದೆ. ಅಂತೆಯೇ ಜನರು ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್ ಕದಲೂರು, ರಮೇಶ ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಎಚ್.ಬಿ.ರಾಮು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ, ಯುವ ಘಟಕದ ಅಧ್ಯಕ್ಷ ವಿಜಯಕಮಾರ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಕೆ.ಕೆ.ರಾಧಾಕೃಷ್ಣ, ಚಿದಂಬರ್, ಸಿದ್ದಾರೂಢ ಸತೀಶ್‌ಗೌಡ, ಶುಭದಾಯಿನಿ, ನಯೀಂ, ಶ್ರೀಧರ್, ಸಿ.ಎಂ.ದ್ಯಾವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net