2019ರ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಕೆಲವು ಮುಖಂಡರು, ಕಾರ್ಯಕರ್ತರು ಪರೋಕ್ಷವಾಗಿ ಸುಮಲತಾ ಅವರ ಪರವಾಗಿ ಕೆಲಸ ಮಾಡಿದ್ದರು. ಚುನಾವಣೆ ಬಳಿಕ ನಂತರದ ಬೆಳವಣಿಗೆಯಲ್ಲಿ ಸಂಸದೆ ಅವರು ಆಡಳಿತದ ಪಕ್ಷದ ಪರವಾಗಿ ಹಲವು ಕಾಯ್ದೆ, ಬಿಲ್‌ಗಳನ್ನು ಬೆಂಬಲಿಸಿದ್ದಾರೆ. ಅಂತೆಯೇ ಕಾಂಗ್ರೆಸ್ ಪರವಾಗಿ ಎಂದೂ ಅವರು ನಿಂತಿಲ್ಲ. ನಗರಸಭೆ ಚುನಾವಣೆ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ಸಹಕಾರ ಸಂಸ್ಥೆಗಳ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲೂ ಸಂಸದರು ತಟಸ್ಥ ನೀತಿ ಅನುಸರಿಸಿದ್ದಾರೆ. ಆದ್ದರಿಂದ ಅವರ ಪರವಾಗಿ ಕಾಂಗ್ರೆಸ್ಸಿಗರು ಹೋಗುವುದು ಸರಿಯಲ್ಲ. ಸಂಸದೆ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆಂಬ ಮಾತುಗಳು ಕೇಳಿಬರುತ್ತಿವೆ. ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಅದಕ್ಕೆ ನಮ್ಮ ತಕರಾರಿಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಸ್ಪಷ್ಟಪಡಿಸಿದರು.