

ಪಾ.ಶ್ರೀ.ಅನಂತರಾಮ್ ಕೋಲಾರ
ಜನತಾ ಪರಿವಾರದ ಹಿರಿಯ ಮುಖಂಡ, ಮಾಜಿ ಸಚಿವ ದಿ.ಆಲಂಗೂರು ಶ್ರೀನಿವಾಸ್ ಮತ್ತು ಮಾಜಿ ಸ್ಪೀಕರ್ ದಿ.ಎಂ.ವಿ.ವೆಂಕಟಪ್ಪ ನಿಧನದ ಬಳಿಕ ಸೂತ್ರವಿಲ್ಲದ ಗಾಳಿಪಟದಂತಾಗಿದ್ದ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ.
ಕ್ಷೇತ್ರ ಮರು ವಿಂಗಡಣೆ ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಒಮ್ಮೆ ಕಾಂಗ್ರೆಸ್, ಎರಡು ಬಾರಿ ಪಕ್ಷೇತರರು ಗೆದ್ದಿದ್ದರೂ ಸಮರ್ಥ ನಾಯಕತ್ವ ನೀಡಲಾಗಿಲ್ಲ.
ಆಲಂಗೂರು ಶ್ರೀನಿವಾಸ್ ರೀತಿಯಲ್ಲಿ ಚಾಣಾಕ್ಷತ ರಾಜಕಾರಣಿ, ಎಂ.ವಿ.ವೆಂಕಟಪ್ಪ ರೀತಿಯ ಮುತ್ಸದ್ಧಿ ರಾಜತಾಂತ್ರಿಕ ಇಲ್ಲದಿರುವುದರಿಂದ ಕ್ಷೇತ್ರದ ಜನತೆಗೆ ಅನಾಥ ಪ್ರಜ್ಞೆ ಕಾಡುವಂತಾಗಿದೆ.
2008ರ ವೇಳೆಗೆ ಮುಳಬಾಗಿಲು ಮೀಸಲು ಕ್ಷೇತ್ರವಾಯಿತು. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ರಾಜಕೀಯ ಉನ್ನತಿಗಾಗಿ ಗ್ರಾಪಂ ಸದಸ್ಯರಾಗಿದ್ದ ಅಂಬರೀಷ್ ಅವರನ್ನು ಅಖಾಡಕ್ಕೆ ಇಳಿಸಿ ಶಾಸಕ ಸ್ಥಾನ ಸಿಗುವಂತೆ ಮಾಡಿದರು. ಆದರೆ ಕ್ಷೇತ್ರದ ಬಹುತೇಕ ಕಾಂಗ್ರೆಸ್ಸಿಗರು ಅಂಬರೀಷ್ ಅವರನ್ನು ನಾಯಕರಾಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ, ರಾಜಕೀಯ ಚದುರಂಗದಾಟ ತಿಳಿಯದೆ ಅಂಬರೀಷ್ ಮತ್ತೊಂದು ಅವಧಿಗೆ ಶಾಸಕರಾಗುವ ಅವಕಾಶ ಕಳೆದುಕೊಂಡರು.
ಕ್ಷೇತ್ರದಲ್ಲಿನ ಗುಂಪುಗಾರಿಕೆ ಸೇರಿ ಇನ್ನಿತರ ಕಾರಣಗಳಿಂದ ಜೆಡಿಎಸ್ ಸಹ ನೆಲ ಕಚ್ಚುವಂತಾಯಿತು. ಅಂದು ಆದ ಗಾಯಕ್ಕೆ ಮುಲಾಮು ಹಚ್ಚುವ ಕೆಲಸ ವರಿಷ್ಠರಿಂದ ಆಗದೆ ಪಕ್ಷ ನರಳಾಡುವಂತಾಗಿದೆ.
2013ರಲ್ಲಿ ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿ ಸಿಗಲಿಲ್ಲ, ಜೆಡಿಎಸ್‌ನಲ್ಲೂ ಗೊಂದಲವಿತ್ತು. ಕೈ ಟಿಕೆಟ್ ಸಿಗದೆ ಕೊತ್ತೂರು ಮಂಜುನಾಥ್ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸಹ ಸದಸ್ಯತ್ವ ಪಡೆದುಕೊಂಡರಾದರೂ ಮುನಿಯಪ್ಪ ಅವರ ಒಳೇಟಿನಿಂದ 2018ರ ಚುನಾವಣೆಗೆ ಸ್ಪರ್ಧಿಸಲಾಗಲಿಲ್ಲ. ಆದರೆ ಕ್ಷೇತ್ರ ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ಎಚ್.ನಾಗೇಶ್ ಅವರನ್ನು ಗೆಲ್ಲಿಸಿಕೊಂಡರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿ ಮುನಿಯಪ್ಪ ವಿರುದ್ಧ ಸೇಡು ತೀರಿಸಿಕೊಂಡರಾದರೂ ಸಚಿವ ನಾಗೇಶ್ ಜತೆ ಹೊಂದಾಣಿಕೆಯಾಗದೆ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದಾರೆ.
ಮುಳಬಾಗಿಲಿನಲ್ಲಿ ಜೆಡಿಎಸ್ ಬಲವರ್ಧನೆ ಆಸೆ ಹೊತ್ತು 10 ವರ್ಷಗಳಿಂದ ಸಂಘಟನಾ ಕಾರ್ಯದಲ್ಲಿ ನಿರತರಾಗಿರುವ ಸಮೃದ್ಧಿ ಮಂಜುನಾಥ್‌ಗೆ ಮಾಜಿ ಪಿಎಂ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಕೃಪೆ ಇದ್ದರೂ ಸ್ವಪಕ್ಷದವರ ಸಹಕಾರ ಸಿಗಲಿಲ್ಲ.
ಡಿಕೆಶಿಗೆ ಪ್ರತಿಷ್ಠೆ: ಕಾಂಗ್ರೆಸ್‌ಗೆ ಡಿ.ಕೆ.ಶಿವಕುಮಾರ್ ಸಾರಥಿಯಾದ ಮೇಲೆ ಜಿಲ್ಲೆಯಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗುತ್ತಿದೆ, ಮುಳಬಾಗಿಲು ವಶಕ್ಕೆ ಪಡೆಯಲು ಚಿಂತನೆ ನಡೆಸಿರುವ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಮೃದ್ಧಿ ಮಂಜುನಾಥ್ ಅಥವಾ ಕೊತ್ತೂರು ಮಂಜುನಾಥ್ ಅವರಲ್ಲಿ ಒಬ್ಬರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆಸಿದ್ದಾರೆ.
ಮಂಜುದ್ವಯರಿಗೆ ಡಿಮಾಂಡ್: ಮಾಜಿ ಸಂಸದ ಮುನಿಯಪ್ಪ ಅವರು ಸಮೃದ್ಧಿ ಮಂಜುನಾಥ್ ಪಕ್ಷಕ್ಕೆ ಬರುವುದಕ್ಕೆ ಸಹಮತ ವ್ಯಕ್ಯಪಡಿಸಿದ್ದಾರೆ. ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಖಜಾಂಚಿ ರಾಮಪ್ರಸಾದ್ ಇನ್ನಿತರರು ಓಕೆ ಎಂದಿದ್ದಾರೆ ಎನ್ನಲಾಗಿದೆ.
ಆದರೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಪರ ಒಲವಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಸೇರಿ ಮುಳಬಾಗಿಲು ತಾಲೂಕಿನ ಹಲವು ಕೈ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜಕೀಯ ಆಟಕ್ಕೆ ಮುಹೂರ್ತ: ಮುಳಬಾಗಿಲು ಕ್ಷೇತ್ರದಿಂದ ಮೊದಲ ಪ್ರಯತ್ನದಲ್ಲೇ ಗೆದ್ದು ಸಚಿವರಾಗಿರುವ ಎಚ್.ನಾಗೇಶ್ ಡಿಕೆಶಿ ಆಪ್ತರಾಗಿದ್ದು ಕ್ಷೇತ್ರದಲ್ಲಿ ನಾಯಕತ್ವ ಬೆಳೆಸಿಕೊಂಡಲ್ಲಿ ಇವರನ್ನೇ ಮುಂದಿನ ಚುನಾವಣೆಗೆ ಅಭ್ಯರ್ಥಿ ಮಾಡಲು ಪ್ರಯತ್ನ ನಡೆಯಬಹುದು ಎನ್ನಲಾಗಿದೆ. ಒಂದು ವೇಳೆ ಕೊತ್ತೂರು ಮಂಜುನಾಥ್ ಅವರನ್ನು ಕೈ ನಿರ್ಲಕ್ಷಿಸಿದಲ್ಲಿ ಇದರ ಲಾಭವನ್ನು ಬಿಜೆಪಿ ಇಲ್ಲವೇ ಜೆಡಿಎಸ್ ಬಳಕೆ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಕರೊನಾ ಆಟ ನಿಲ್ಲಿಸಿದ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಆಟಕ್ಕೆ ಮುಹೂರ್ತ ಫಿಕ್ಸ್ ಆಗುವ ಲಕ್ಷಣ ಕಾಣಬರುತ್ತಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸೇರಿಸಿಕೊಳ್ಳುತ್ತೇವೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಅವರ ಸೇರ್ಪಡೆ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಧರಿಸುತ್ತಾರೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಕೆ.ಚಂದ್ರಾರೆಡ್ಡಿ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್, ಕೋಲಾರ