ಸೌಲಭ್ಯ ಬಳಸಿಕೊಂಡು ಸ್ವಾವಲಂಬಿಗಳಾಗಲಿ: ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಸಲಹೆ

Congratulatory program for new directors Mandya
Published on

ಮಂಡ್ಯ: ಮನ್‌ಮುಲ್‌ನಿಂದ ಸಿಗುವ ಸೌಲಭ್ಯಗಳನ್ನು ರೈತರು ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಸಲಹೆ ನೀಡಿದರು.

ನಗರದ ಕೆರೆಯಂಗಳದಲ್ಲಿರುವ ಮನ್‌ಮುಲ್ ಉಪಕಚೇರಿಯಲ್ಲಿ ಆಯೋಜಿಸಿದ್ದ ಫಲಾನುಭವಿಗಳಿಗೆ ಚೆಕ್ ವಿತರಣೆ, ನೂತನ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಏಳು ತಾಲೂಕಿನಿಂದಲೂ ಗುಣಮಟ್ಟದ ಹಾಲನ್ನು ಮನ್‌ಮುಲ್‌ಗೆ ಸರಬರಾಜು ಮಾಡಲಾಗುತ್ತಿದೆ. ಮನ್‌ಮುಲ್ ಅಧಿಕಾರಿಗಳು ರೈತರ ಕಷ್ಟ ಸುಖಗಳನ್ನು ನೋಡಬೇಕು. ಪಶು ವೈದ್ಯರು ರೈತರ ರಾಸುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.

ರೈತರು ರಾಸುಗಳಿಗೆ ವಿಮೆ ಮಾಡಿಸಬೇಕು. ಒಂದು ವೇಳೆ ಆಕಸ್ಮಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ರೈತರಿಗೆ ಮನ್‌ಮುಲ್‌ನಿಂದ ಪರಿಹಾರ ಸಿಗುತ್ತದೆ. ಈ ಸೌಲಭ್ಯವನ್ನು ರೈತರು ಬಳಸಿಕೊಳ್ಳಬೇಕು. ಜತೆಗೆ ಹಾಲು ಉತ್ಪಾದಕರಿಗೆ ಗುಂಪು ವಿಮೆ ಪಡೆದುಕೊಂಡರೆ, ಅದು ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಸಲಹೆ ನೀಡಿದರು.

ಉಪ ವ್ಯವಸ್ಥಾಪಕ ಡಾ.ಮಂಜೇಶ್ ಮಾತನಾಡಿ, ಯಾವುದೇ ಸಂಘಟನೆ ಅಥವಾ ಪಕ್ಷವಿರಲಿ ಅದೆಲ್ಲವನ್ನು ಮರೆತು ಒಬ್ಬ ವ್ಯಕ್ತಿಯನ್ನು ಮರು ಆಯ್ಕೆ ಮಾಡುತ್ತಾರೆ ಎಂದರೆ ಗೆಲುವು ಪಡೆದ ವ್ಯಕ್ತಿಗಳು ರೈತರ ಸಮಸ್ಯೆಗಳನ್ನು ಆಲಿಸಿರುವುದೇ ಕಾರಣವಾಗಿದೆ. ಹಾಲು ಉತ್ಪಾದಕರು ಮತ್ತು ರೈತರ ಪರವಾಗಿ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗಲಿ ಎಂದು ಮನವಿ ಮಾಡುತ್ತೇನೆ ಎಂದರು.

ಮನ್‌ಮುಲ್ ನಿರ್ದೇಶಕರಾದ ಎಂ.ಎಸ್.ರಘುನಂದನ್, ಯು.ಸಿ.ಶಿವಕುಮಾರ್, ಯೂನಿಯನ್ ನಿರ್ದೇಶಕ ಶಿವಕುಮಾರ್, ಡಾ.ಯಶವಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net