

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ನಿಸ್ವಾರ್ಥವಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರ ಶ್ರಮ ಕಾರಣ. ಸಂಘಟನಾತ್ಮಕ ಕಾರ್ಯಕರ್ತರು ನಮ್ಮ ಶಕ್ತಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಧಾರವಾಡ- 71 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ 5 ಬಾರಿ ದಿಗ್ವಿಜಯಕ್ಕೆ ಕಾರಣ ಬೂತ್ ಮಟ್ಟದ ಕಾರ್ಯಕರ್ತರು. ಒಗ್ಗಟ್ಟಿನಿಂದ ಮನೆಮನೆಗೆ ತೆರಳಿ ಹೆಚ್ಚೆಚ್ಚು ಸದಸ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಕನಿಷ್ಠ 100 ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಸಕ್ರಿಯ ಕಾರ್ಯಕರ್ತರಾಗಬೇಕು. 2047ರಲ್ಲಿ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ. ಪಕ್ಷ ಮತ್ತು ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ ಮತ್ತು ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಮಂಡಳ ಅಧ್ಯಕ್ಷ ಸುನೀಲ ಮೋರೆ, ರುದ್ರಪ್ಪ ಅರಿವಾಳ, ಜಯತೀರ್ಥ ಕಟ್ಟಿ, ಸವಿತಾ ಅಮರಶೆಟ್ಟಿ, ಗುರುನಾಥ ಗೌಡರ, ಸಂಗನಗೌಡ ರಾಮನಗೌಡರ, ಶ್ರೀನಿವಾಸ ಕೋಟ್ಯಾನ್, ಹರೀಶ ಬಿಜಾಪುರ, ಇತರರಿದ್ದರು.