

ಕೆ.ಆರ್.ಪೇಟೆ: ರೋಗಿಗಳ ಕಾಯಿಲೆ ಗುಣಪಡಿಸುವಲ್ಲಿ ಹಾಗೂ ಅವರಿಗೆ ಮಾನಸಿಕ ಧೈರ್ಯ ತುಂಬುವಲ್ಲಿ ದಾದಿಯರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ಸಂತೇಬಾಚಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೆಳೆಯರ ಬಳಗ ಹಾಗೂ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ವತಿಯಿಂದ ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾದಿಯರು ನೀಡುವ ಸೇವೆ ನೋಡಿದಾಗ ಅವರ ವೃತ್ತಿ ಮೇಲೆ ಗೌರವ ಮೂಡುತ್ತದೆ. ರೋಗಿಗಳಿಗೆ ತಾಯಿಯಂತೆ ಧೈರ್ಯ ತುಂಬುತ್ತಾರೆ. ಅವರ ನಿಸ್ವಾರ್ಥ ಸೇವೆಯನ್ನ ಸ್ಮರಿಸುವ ದಿನವಾಗಿದೆ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ವಾರಗಳ ಕಾಲ ದಾದಿಯರು ರೋಗಿಗಳನ್ನು ಹಾರೈಕೆ ಮಾಡುತ್ತಾರೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ದಾದಿಯರಾಗಿ ಸಾಧನೆ ಮಾಡಿದ ಪ್ಲಾರೆನ್ಸ್ ನೈಟಿಂಗೇಲ್ ಮೇ 12ರ 1820 ರಲ್ಲಿ ಇಟಲಿಯ ಪ್ಲಾರೆಂಟನಲ್ಲಿ ಜನಿಸಿದರು. ಅವರು ಯುದ್ಧದ ಕಾಲದಲ್ಲಿ ಸೈನಿಕರಿಗೂ ಸೇವೆ ಸಲ್ಲಿದ್ದರು. ಇವರನ್ನು ದಾದಿಯರ ಸಂಸ್ಥಾಪಕ ಎಂದು ಕರೆಯಲಾಗುತ್ತದೆ ಎಂದರು.
ಸಂತೇಬಾಚಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಧುಸೂದನ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಬಿ.ಮೋಹನ್, ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಪದಾಧಿಕಾರಿಗಳಾದ ಕೆ.ಆರ್.ಶಶಿಧರ್, ಎಸ್.ಎಂ.ಲೋಕೇಶ್, ಸಂಪತ್ ಕುಮಾರ್, ಗೆಳೆಯರ ಬಳಗದ ಅಧ್ಯಕ್ಷ ಜಯಕುಮಾರ್, ಎಸ್.ಎಚ್.ಕೃಷ್ಣ, ಎಸ್.ಬಿ.ಸೋಮಶೇಖರ್, ಎಸ್.ಎನ್.ಕೃಷ್ಣ, ನಿವೃತ್ತ ಇಂಜಿನಿಯರ್ ಸೋಮೇಶ್, ಆಶಾ ಕಾರ್ಯಕರ್ತರು, ದಾದಿಯರು ಇದ್ದರು.