

ಎಚ್.ಡಿ.ಕೋಟೆ: ಬಿಜಿಎಸ್ ಸಂಸ್ಥೆಯಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳಿದ್ದರೂ ತಾಲೂಕಿನ ಶಿಕ್ಷಣ ಸಂಸ್ಥೆಗೆ ವಿಶೇಷ ಸ್ಥಾನವಿದೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕು ಒಕ್ಕಲಿಗರ ಸಂಘ ಮತ್ತು ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಪಿ.ಬಸವೇಗೌಡ ಅವರಿಗೆ ಅಭಿನಂದನೆ ಮತ್ತು ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಓದು, ನನ್ನ ಸಂಪಾದನೆ ನನ್ನ ಕುಟುಂಬಕ್ಕೆ ಮಾತ್ರ ಎಂದರೆ ಆತನಿಗೆ ಸಮಾಜದ ಬಗ್ಗೆ ಚಿಂತನೆಗಳು ಇರುವುದಿಲ್ಲ. ಪರರ ಸೇವೆಯಲ್ಲಿ ಆನಂದವನ್ನು ಕಾಣಲು ಸಾಧ್ಯವಿಲ್ಲ ಎಂದರು.
ಸೇವೆಯೆ ಪರಧರ್ಮ ಎಂದು ಸನ್ಯಾಸಿಗಳು ಬದುಕುತ್ತಾರೆ. ಭಕ್ತರು ಸೇರಿದರೆ ಮಾತ್ರ ಮಠವನ್ನು ನಡೆಸಲು ಸಾಧ್ಯ. ಪರರ ಜೀವನದಲ್ಲಿ ಬೆಳಕನ್ನು ಕಾಣಲು ಹೊರಟ ವ್ಯಕ್ತಿ ಎಂದೂ ಕತ್ತಲನ್ನು ಕಾಣುವುದಿಲ್ಲ ಎಂದರು.
ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಪಿ.ಬಸವೇಗೌಡ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆ ತೆರೆಯಬೇಕು ಎಂದು ಕನಸು ಕಂಡು ಬಾಲಗಂಗಾಧರನಾಥ ಸ್ವಾಮೀಜಿ ಮೂಲಕ ಸಾಕಾರಗೊಳಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತೆ ಮಾಡಲಾಗಿದ್ದು, ಪ್ರಸ್ತುತ 4 ಸಾವಿರ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಮೈಸೂರು ಶಾಖಾ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ, ವಿದ್ಯಾವರ್ಧಕ ಕಾಲೇಜಿನ ಅಧ್ಯಕ್ಷ ಗುಂಡಪ್ಪಗೌಡ, ಮುಖಂಡರಾದ ನಾರಾಯಣಗೌಡ, ಸಿ.ಎನ್.ನರಸಿಂಹೇಗೌಡ, ಬಿ.ಪಿ.ಭಾಸ್ಕರ್, ಚಲುವ, ಸುರೇಂದ್ರ, ಡಿ.ಆರ್.ಮಹೇಶ್, ತಮ್ಮಣ್ಣೇಗೌಡ, ನಿಂಗೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಜೆ. ಕಾಳೇಗೌಡ ಇದ್ದರು.