

ಮಂಡ್ಯ: ಇಂದಿನ ಸನ್ನಿವೇಶದಲ್ಲಿ ಸೇವೆಯ ವಿಷಯಕ್ಕೆ ಬಂದಾಗ ಶಿಕ್ಷಣ ಮತ್ತು ಆರೋಗ್ಯ ಮನುಕುಲಕ್ಕೆ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ಡಾ.ಮೀರಾ ಶಿವಲಿಂಗಯ್ಯ ಅವರ ಸೇವೆ ಶ್ಲಾಘನೀಯ ಎಂದು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಡಾ.ಮೀರಾ ಶಿವಲಿಂಗಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಶಿಕ್ಷಣ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅಂತರ ಉಂಟು ಮಾಡಿವೆ. ಇವುಗಳ ನಡುವೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮನಾಗಿ ಓದಬಲ್ಲರು ಅವಕಾಶವನ್ನು ಪಡೆಯಬಲ್ಲರು ಎಂಬುದು ಪ್ರಶಂಸನೀಯ ಎಂದರು.
ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಗುರು-ಶಿಷ್ಯರ ಸಂಬಂಧ, ಅಧಿಕಾರಿಗಳು ಉಪನ್ಯಾಸಕರ ಸಂಬಂಧ ಹದಗೆಡುತ್ತಿರುವ ಸಂದರ್ಭದಲ್ಲಿ ಮೀರಾ ಶಿವಲಿಂಗಯ್ಯ ಶಿಕ್ಷಣ ತಜ್ಞೆಯಾಗಿ ವಿವಿಧ ರೀತಿಯ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಪುರುಷರು ಸವಾಲುಗಳನ್ನು ಸ್ವೀಕರಿಸುವಷ್ಟು ಸ್ತ್ರೀಯರು ಸ್ವೀಕರಿಸಲು ಕಷ್ಟದ ಸಂದರ್ಭದಲ್ಲಿ ಇವರ ಕಾರ್ಯತತ್ಪರತೆ ಅರಿವಾಗುತ್ತದೆ ಎಂದು ತಿಳಿಸಿದರು.
ಹೊಸ ಶಿಕ್ಷಣ ರೀತಿಯಲ್ಲಿ ವಿವಿಧ ರೀತಿಯ ಗೊಂದಲಗಳಿದ್ದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ. ಸೇವೆ ಮತ್ತು ಉದ್ಯಮ ಬೇರೆ ಬೇರೆಯಾಗಿದ್ದರೂ ಶಿಕ್ಷಣ ಉದ್ಯಮವಾಗಿರುವ ಸಂದರ್ಭದಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಅದನ್ನು ಮಹಿಳೆಯಾಗಿ ನಿಭಾಯಿಸಿರುವುದು ಪ್ರಶಂಸನೀಯ. ಇವರ ಕೆಲಸದಲ್ಲಿ ಪತಿ ಶಿವಲಿಂಗಯ್ಯ ಅವರು ಪರಸ್ಪರ ಕಾಯಕದಲ್ಲಿ ಎಡಬಿಡದೆ ಹಿಂಬಾಲಿಸಿ ಸಹಕಾರ ನೀಡುತ್ತಿರುವ ರೀತಿ ಇವರ ಸಾಧನೆಗೆ ಅವರ ದಾಂಪತ್ಯ ಯಶಸ್ಸಿಗೆ ಕಾರಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಜಗತ್ತಿನ ಹಲವಾರು ಜೀವನ ಚರಿತ್ರೆಯನ್ನು ಓದಿದ್ದೇನೆ. ಒಬ್ಬ ಜೀವನ ಚರಿತ್ರೆ ಬರೆಯುವಾಗ ಏಕಪಾತ್ರೆ ಅಭಿನಯ ಇರುವುದಿಲ್ಲ. ಬದಲಿಗೆ ಅವನ ಸುತ್ತ ಹಲವಾರು ಪಾತ್ರಗಳು ಸುತ್ತುತ್ತವೆ. ಜಿಲ್ಲೆಯಲ್ಲಿ ಒಬ್ಬ ಹೆಣ್ಣು ಮಗಳು ಏನೆಲ್ಲ ಸಾಧನೆ ಮಾಡಬೇಕೆನ್ನುವುದನ್ನು ಮೀರಾ ಅವರನ್ನು ನೋಡಿ ಕಲಿಯಬೇಕಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಮೀರಾ ಶಿವಲಿಂಗಯ್ಯ, ತನ್ನೆಲ್ಲ ಸಾಧನೆಗೆ ಕಂಪ್ಯೂಟರ್ ಶಿಕ್ಷಣ ತಳಹದಿಯಾಯಿತು. ತಾವು ನಡೆದು ಬಂದ ಜೀವನ ದಾರಿ ಒಳ್ಳೆಯ ಅನುಭವ ನೀಡಿದೆ. ಚಿಕ್ಕಂದಿನಿಂದಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಭಾವನೆ ಬಂದಿತ್ತು. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದೇನೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಭಿನಂದನಾ ನುಡಿಗಳನ್ನಾಡಿದರು. ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ಲೋಕೇಶ್ ಚಂದಗಾಲು, ವಿಜಯಲಕ್ಷ್ಮೀ ರಘುನಂದನ್, ಅನಿತಾ, ಹನಕೆರೆ ನಾಗಪ್ಪ, ಡಾ.ಕೆಂಪಮ್ಮ, ಕೋಣನಹಳ್ಳಿ ಜಯರಾಮು ಹಾಜರಿದ್ದರು.