

ವಿಜಯವಾಣಿ ಸುದ್ದಿಜಾಲ ಧಾರವಾಡ
ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್, ಕಲೆ ಮತ್ತು ಸಾಂಸ್ಕೃತಿಕ ವಿಶ್ವ ವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ನಗರದ ಕಲಾ ಸಂಗಮ ಅಧ್ಯಕ್ಷ ಡಾ. ಪ್ರಭು ಹಂಚಿನಾಳ ಅವರ ಅಭಿನಂದನಾ ಸಮಾರಂಭವನ್ನು ಜ. 29ರಂದು ಸಂಜೆ 5.30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿದೆ ಎಂದು ಕಲಾವಿದ ಡಾ. ಕಲ್ಮೇಶ ಹಾವೇರಿಪೇಟ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿಗಳಾಗಿ ನ್ಯಾಯವಾದಿ ಪ್ರಕಾಶ ಉಡಿಕೇರಿ, ಸದಾನಂದ ಡಂಗನವರ, ರಾಜಶೇಖರ ಹೊನ್ನಪ್ಪನವರ, ಮಂಜುನಾಥ ಹಗೇದಾರ, ಇತರರು ಆಗಮಿಸಲಿದ್ದಾರೆ. ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎದರು.
ನಗರದಲ್ಲಿ 40 ವರ್ಷಗಳಿಂದ ರಂಗಭೂಮಿ, ಕಿರುಚಿತ್ರ, ಚಲನಚಿತ್ರ ಮತ್ತು ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಂಘಟಕ, ಕಲಾವಿದ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಾಸಂಗಮ ಎಂಬ ಸಂಸ್ಥೆ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ, ಕಲೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಾಧನೆ ಪರಿಗಣಿಸಿ ಮ್ಯಾಜಿಕ್ ಬುಕ್ ಆಫ್ ರೆಕಾರ್ಡ ಕಲೆ ಮತ್ತು ಸಾಂಸ್ಕೃತಿಕ ವಿವಿ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಇದು ಜಿಲ್ಲೆಯ ಸಮಸ್ತ ಕಲಾ ಬಳಗಕ್ಕೆ ಸಂದ ಗೌರವ. ಹೀಗಾಗಿ ಕಲಾವಿದರು, ಗೆಳೆಯರ ಬಳಗ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದರು.
ರಮೇಶ ಹಿರೇರಡ್ಡಿ, ಎನ್.ಎ. ದೇಸಾಯಿ, ಬಸವರಾಜ ಮುರಗೋಡ, ಡಾ. ಅರವಿಂದ ಮುಳಗುಂದ, ಪ್ರಭು ಹಂಚಿನಾಳ, ಇತರರು ಇದ್ದರು.