

ಮಂಡ್ಯ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರು ಸಾಂಸ್ಕೃತಿಕ ರಾಯಭಾರಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶ್ಲಾಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರೊ.ಜಯಪ್ರಕಾಶಗೌಡ ಅಭಿನಂದನಾ ಸಮಿತಿ, ಕರ್ನಾಟಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ಜಯಪ್ರಕಾಶಗೌಡ-75 ಅಭಿನಂದನೆ ಹಾಗೂ ರಂಗಾಭಿನಂದನ ಅಭಿನಂದನಾ ಗ್ರಂಥ ಹಾಗೂ ನಾಥಪಂಥ ಎಂಟು ಸಂಪುಟಗಳ ಮಾಲಿಕೆ ಪ್ರಥಮ ಸಂಪುಟ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಜೆಪಿ ಅವರು ಶ್ರೀಮಠವನ್ನು ಅಪ್ಪಿಕೊಂಡ ವ್ಯಕ್ತಿ. ಮಾತ್ರವಲ್ಲದೆ ಶಾಸ್ತ್ರದ ಜತೆಗೆ ಸಾಮಾಜಿಕ, ಆಧುನಿಕ, ವೈಜ್ಞಾನಿಕ, ತಂತ್ರಜ್ಞಾನ ಓದಿಕೊಂಡರೆ ಬೆಲೆ ಬರುತ್ತದೆ ಎಂಬುದನ್ನು ನಂಬಿದವರು. ಇವತ್ತಿನ ಸಮಾಜಕ್ಕೆ ಹಾಗೂ ಬದಲಾದ ಕಾಲಘಟ್ಟದಲ್ಲಿ ನಾವು ಇರಬೇಕು. ಇಂತಹವರನ್ನ ಉಳಿಸಿಕೊಳ್ಳಬೇಕು. ಇವರ ಜತೆ ನಾವಿದ್ದೇವೆ ಎಂಬುದಷ್ಟೇ ಅಲ್ಲ ಇಡೀ ಚುಂಚನಗಿರಿ ಮಠ ಇರುತ್ತದೆ ಎಂದು ಪ್ರತಿಪಾದಿಸಿದರು.
ಹೊಸ ಚೇತನವನ್ನು ಪಡೆಯಲು ದಾರಿ ಯಾರು ತೋರಿಸುವರೋ ಅವರನ್ನ ಮರೆಯಬಾರದು. ಮನಸ್ಸನ್ನು ಒಡೆಯುವಂತಹ ವಿದ್ಯೆಗಳನ್ನು ಹೇಳಿಕೊಡುವಂತಿದೆ. ಆದರೆ ಮನಸ್ಸುಗಳನ್ನು ಕೂಡಿಸುವಂತಹ ಕಲೆಯನ್ನು ಹೇಳಿಕೊಡಬೇಕಾದ ಅವಶ್ಯಕತೆ ಇದೆ. ಕೂಡಿಸುವುದರಲ್ಲಿ ಶಕ್ತಿ ಇರುತ್ತದೆ. ಅದೇ ರೀತಿ ಬೇರ್ಪಡಿಸುವಿಕೆಯಲ್ಲಿ ಶಕ್ತಿ ಕಡಿಮೆ ಇರುತ್ತದೆ. ಜೆಪಿ ಅವರು ಕೂಡಿಸುವ ಕಲೆಯನ್ನು ಕಲಿತಿದ್ದಾರೆ. ಕೇವಲ ಮನಸನ್ನು ಕೂಡಿಸುವುದಷ್ಟೇ ಅಲ್ಲ ತನ್ನೊಳಗಡೆ ಒಡೆದಿರುವ ವ್ಯಕ್ತಿತ್ವವನ್ನು ಕೂಡಿಸುವ ಶಕ್ತಿಯನ್ನು ಬಹಳ ಮಾಡಿದ್ದಾರೆ ಎಂದು ಶ್ಲಾಘಿಸಿದ ಅವರು, ಜಯಪ್ರಕಾಶಗೌಡ ಅವರು ಸಾಂಸ್ಕೃತಿಕ ರಾಯಭಾರಿಯಾಗಿ ರಾಜ್ಯದೆಲ್ಲೆಡೆ ಪಸರಿಸುತ್ತಿದ್ದಾರೆ. ಸಂಸ್ಕೃತಿ ಇಲ್ಲದ ವ್ಯಕ್ತಿ ಪ್ರಯೋಜನಕ್ಕೆ ಬರುವುದಿಲ್ಲ. ಒಬ್ಬ ವ್ಯಕ್ತಿ ಸುಸಂಸ್ಕೃತರಾಗಬೇಕು. ದೇಹದ ನಡೆ ನುಡಿ, ಮಾನಸಿಕ ಸ್ಥಿರತೆ, ಭೌತಿಕ, ಆಧ್ಯಾತ್ಮಿಕತೆಯನ್ನು ನೋಡಿ ಸುಸಂಸ್ಕೃತ ವ್ಯಕ್ತಿ ಎಂಬುದನ್ನು ತಿಳಿಯಬಹುದು. ಆ ಮಾದರಿಯಲ್ಲಿ ಜೆಪಿ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಒ ಜಯರಾಂ ರಾಯಪುರ ಮಾತನಾಡಿ, ಸಮಷ್ಟ ಪ್ರಜ್ಞೆ ಇರಬೇಕು. ಇದು ಎಲ್ಲರಲ್ಲಿಯೂ ಇರುವುದಿಲ್ಲ. ಸಾಮಾಜಿಕ, ಸಾಹಿತ್ಯಕ ಹಾಗೂ ಐತಿಹಾಸಿಕ ಪ್ರಜ್ಞೆ ಮೂಡಿಸಿಕೊಂಡವರು ದಾರ್ಶನಿಕ ವ್ಯಕ್ತಿಯಾಗಿ ನಾಯಕರಾಗಿ ಹೊರಹೊಮ್ಮುತ್ತಾರೆ. ಗುಣಾತ್ಮಕ ಮತ್ತು ಧನಾತ್ಮಕವನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳನ್ನು ನೆನೆದುಕೊಳ್ಳುವುದು ಉತ್ತಮವಾದ ಕೆಲಸ. ಇದೆಲ್ಲವನ್ನು ಉಳ್ಳವರು ಜಯಪ್ರಕಾಶಗೌಡರು. ಕರ್ನಾಟಕ ಸಂಘವನ್ನು ಕಟ್ಟಿ ರಾಜ್ಯದೆಲ್ಲೆಡೆ ಪಸರಿಸುತ್ತಿರುವ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಭಿನಂದನಾ ಸಮಿತಿ ಅಧ್ಯಕ್ಷ ಎಂ.ಶ್ರೀನಿವಾಸ್, ಮಾಜಿ ಎಂಎಲ್‌ಸಿಗಳಾದ ಬಿ.ರಾಮಕೃಷ್ಣ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಸಾಹಿತಿ ರಾಗೌ, ಲೇಖಕಿ ಪದ್ಮಾಶೇಖರ್, ಡಾ.ಮ.ರಾಮಕೃಷ್ಣ, ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕರ್ನಾಟಕ ಸಂಘದ ತಗ್ಗಹಳ್ಳಿ ವೆಂಕಟೇಶ್, ಹರೀಶ್‌ಕುಮಾರ್, ಶಿವರಾಜು ಕೀಲಾರ, ಜಿ.ಟಿ.ವೀರಪ್ಪ, ಡಾ.ಕೆಂಪಮ್ಮ ಇತರರಿದ್ದರು.
1300 ಪುಟದ ಅಭಿನಂದನಾ ಗ್ರಂಥ
75ನೇ ವಸಂತಕ್ಕೆ ಕಾಲಿಟ್ಟಿರುವ ಪ್ರೊ.ಬಿ.ಜಯಪ್ರಕಾಶಗೌಡ ಅವರನ್ನು ಸಾಧನೆ ಕುರಿತು ಅತ್ಮೀಯರು, ಹಿತೈಷಿಗಳು, ಶಿಷ್ಯರು ಹಾಗೂ ನಾಡಿನ ಗಣ್ಯರ ಸಹಯೋಗದಲ್ಲಿ ಸಂಪಾದಿಸಿರುವ ಬರೋಬರಿ 1300 ಪುಟಗಳ ‘ರಂಗಾಭಿನಂದನ ಅಭಿನಂದನಾ ಗ್ರಂಥ’ವನ್ನು ಲೋಕಾರ್ಪಣೆಗೊಳಿಸಲಾಯಿತು. ಅಂತೆಯೇ ನಾಥಪಂಥ ಸಂಪುಟಗಳ ಮಾಲಿಕೆ ಪ್ರಥಮ ಸಂಪುಟವನ್ನು ಬಿಡುಗಡೆ ಮಾಡಲಾಯಿತು.
ಇದಲ್ಲದೆ ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಸುಗಮ ಸಂಗೀತ, ರಂಗಗೀತೆ, ಜನಪದ ಪ್ರದರ್ಶನ ಕಲೆಗಳ ಉತ್ಸವದ ರಂಗ ಸಂಭ್ರಮ ನೆರೆದಿದ್ದವರ ಮನತಣಿಸಿತು. ಅಂತೆಯೇ ಜೆಪಿ-ನೆನಪಿನಂಗಳದಲ್ಲಿ ಕಾರ್ಯಕ್ರಮದಲ್ಲಿ ಅವರ ಕುರಿತು ಗಣ್ಯರು ಮಾತನಾಡಿದರು.