

ಮಂಡ್ಯ: ಸಮಾಜದಲ್ಲಿ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವುದು ನಡವಳಿಕೆ. ಈ ನಿಟ್ಟಿನಲ್ಲಿ ಮಾಜಿ ಎಂಎಲ್‌ಸಿ ಬಿ.ರಾಮಕೃಷ್ಣ ಮೇರು ವ್ಯಕ್ತಿತ್ವ ಹೊಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿ.ರಾಮಕೃಷ್ಣ ಅಭಿನಂದನಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಅವರಿಗೆ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಿ.ರಾಮಕೃಷ್ಣ ಸರಳ ವ್ಯಕ್ತಿತ್ವ ಉಳ್ಳವರಾಗಿದ್ದು, ಇತತರಿಗೆ ಮಾದರಿಯಾಗಿದ್ದಾರೆ. ಸಾಮಾನ್ಯ ಜೀವನ ನಡೆಸಲಿಕ್ಕೆ ಪ್ರಾರಂಭ ಮಾಡಿದ ವ್ಯಕ್ತಿ ಇಂದು ರಾಜ್ಯಮಟ್ಟದಲ್ಲಿ ತಮ್ಮ ಛಾಪುನ್ನು ಮೂಡಿಸಿದ್ದಾರೆ ಎಂದರು.
ರಾಮಕೃಷ್ಣ ಅವರು ಬಹಳ ವಿಶೇಷ ವ್ಯಕ್ತಿ. ಮನುಷ್ಯನಿಗೆ ಇರಬೇಕಾದ ಬಹಳ ಮುಖ್ಯವಾದ ವ್ಯಕ್ತಿತ್ವ ಅವರಿಗೆ ಇದೆ. ಯಾವುದು ಮನುಷ್ಯನಿಗೆ ಇರಬೇಡವೋ ಅದ್ಯಾವುದು ಇಲ್ಲ. ಮನುಷ್ಯ ಮತ್ತು ವ್ಯವಸ್ಥೆಗೆ ಹಾನಿಯಾಗುವ ಯಾವುದೇ ವ್ಯಕ್ತಿತ್ವ ಇವರಲ್ಲಿ ಇಲ್ಲ. ಸತ್ಯ, ಸುಳ್ಳು, ಒಳ್ಳೆಯದು, ಕೆಟ್ಟದ್ದು ಒಟ್ಟಿಗೆ ಇರುತ್ತದೆ. ಆದರೆ ಇವರು ಒಳ್ಳೆಯದನ್ನೇ ರೂಢಿಸಿಕೊಂಡು ಸತ್ಯವಾಗಿ ಬದುಕಿದ್ದಾರೆ. ವ್ಯಕ್ತಿತ್ವದ ಜತೆಗೆ ಸ್ನೇಹಮಯವಾಗಿ ಬದುಕಿದ್ದಾರೆ. ನಾನು ರಾಜಕೀಯಕ್ಕೆ ಕಾಲಿಟ್ಟಾಗ ನನ್ನೊಂದಿಗೆ ಕೈಜೋಡಿಸಿ ಬೆಳದವರು. ಇವರು ಎಲ್ಲರಿಗೂ ಆದಷ್ಟು ಸಹಾಯ ಮಾಡಿದ್ದಾರೆ. ಕಷ್ಟ ಅಂತ ಬಂದು ತಮ್ಮ ಬಳಿ ಅಳಲು ತೋಡಿಕೊಂಡಾಗ ಯಾರಿಗೂ ಬರಿಗೈಯಲಿ ಕಳುಹಿಸಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕೂಡ ಏನಾದರು ಸೇವೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಊರಿನಲ್ಲಿಯೇ ಶಿಕ್ಷಣ ಸಂಸ್ಥೆ ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆಯೆರಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದಲ್ಲಿ ವಿಶೇಷ ಗೌರವ ಪಡೆದುಕೊಂಡಿದ್ದಾರೆ. ಮುಂದಿನ ದಿನದಲ್ಲಿ ಉತ್ತಮ ಅವಕಾಶ ಸಿಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರಾಮಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ರೈತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆಗೆ ದನಿಯಾಗಿ ಕೆಲಸ ಮಾಡಿದ್ದಾರೆ. ಸರಳ ವ್ಯಕ್ತಿತ್ವದ ಜತೆಗೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂದು ನನಗೆ ಮುಕ್ತ ಮನಸ್ಸಿನಿಂದ ರಾಜಕೀಯ ಅವಕಾಶ ನೀಡಿದ್ದರು. ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಬೇಕೆಂದು ಸಚಿವ ಚಲುವರಾಯಸ್ವಾಮಿ ಬಳಿ ಮನವಿ ಮಾಡಿದರು.
ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಅಭಿನಂದನಾ ಭಾಷಣ ಮಾಡಿದರು. ಆದಿಚುಂಚನಗಿರಿ ಮಠದ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಎಂಎಲ್‌ಸಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಕೆ.ಬಿ.ಚಂದ್ರಶೇಖರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಾಜಿ ಎಂಎಲ್‌ಸಿ ಬಿ.ರಾಮಕೃಷ್ಣ, ಚಂದ್ರಕಲಾ ರಾಮಕೃಷ್ಣ, ಮಕ್ಕಳಾದ ವಿನಯ್ ರಾಮಕೃಷ್ಣ, ಕೀರ್ತನಾ, ಅಭಿನಂದನಾ ಸಮಿತಿ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಇತರರಿದ್ದರು.
ಗ್ರಂಥ ಬಿಡುಗಡೆ, ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಸ್ನೇಹಜೀವಿ(ಬಿ.ರಾಮಕೃಷ್ಣ ಜೀವನ ವಿಚಾರ) ಹಾಗೂ ಸಾಧನಾ ಪಥ(ಅಭಿನಂದನಾ ಸಂಪುಟ) ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಬಿ.ರಾಮಕೃಷ್ಣ ಅವರ ಹೆಸರಿನಲ್ಲಿ ಕರ್ನಾಟಕ ಸಂಘದಿಂದ ಪ್ರಥಮ ವರ್ಷದ ಸಾಹಿತ್ಯ ಪ್ರಶಸ್ತಿಯನ್ನು ಚಿಕ್ಕಮಗಳೂರು ಜಿಲ್ಲೆ ಅನುವನಹಳ್ಳಿಯ ಸಾಹಿತಿ ಡಾ.ರಾಜಪ್ಪ ದಳವಾಯಿ ಹಾಗೂ ಕೃಷಿಕ ಪ್ರಶಸ್ತಿಯನ್ನು ಕೆ.ಆರ್.ಪೇಟೆ ತಾಲೂಕು ಗೂಡೆಹೊಸಹಳ್ಳಿಯ ಪ್ರಗತಿಪರ ರೈತ ಜವರಾಯಿಗೌಡ ಅವರಿಗೆ ತಲಾ 50 ಸಾವಿರ ರೂ ನಗದು ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.