

ಮಂಡ್ಯ: ಸಾಹಿತ್ಯದಲ್ಲಿ ಸಂಸ್ಕಾರ ಬಿಂಬಿಸುವ ಸಾಮಾಜಿಕ ಜವಬ್ದಾರಿ ಬೆಳೆಸುವ ಸತ್ವವಿರಬೇಕು. ಜತೆಗೆ ಎಲ್ಲ ಕಾಲಕ್ಕೂ ಸಲ್ಲುವ ಹಾಗೂ ಸಂಗೀತಕ್ಕೂ ಅಳವಡಿಸಿಕೊಳ್ಳುವ ಪ್ರಬುದ್ದತೆಯ ಸಾಹಿತ್ಯದ ಅಗತ್ಯವಿದೆ ಎಂದು ಜಿಲ್ಲಾ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.
ನಗರದ ಗಾಂಧಿಭವನದಲ್ಲಿ ಕರುನಾಡ ಸಿರಿಸಂಪದ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕವಿ-ಕಾವ್ಯ ಸಂಭ್ರಮಾಚಣೆ, ಕವಿಗೋಷ್ಠಿ, ಗೀತಗಾಯನ-ಲೋಗೋ ಬಿಡುಗಡೆ, ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾರಸತ್ವ ಲೋಕದಲ್ಲಿ ಸಾಹಿತ್ಯ-ಸಂಗೀತ ಎಲ್ಲರಿಗೂ ಅಗತ್ಯವಿದೆ. ಕವನ-ಕವಿತೆ ಬರೆದ ಬಳಿಕ ವಿಮರ್ಶೆ ಮಾಡಿ ಮತ್ತೆ ತಿದ್ದಿ ಒಂದು ಸಂಸ್ಕಾರಯುತ ಸಾಹಿತ್ಯ ಹೊರಹೊಮ್ಮಬೇಕು. ಪ್ರಮುಖವಾಗಿ ಸಮಾಜ ತಿದ್ದುವ ಗಟ್ಟಿತನದ ಹಾಗೂ ಪ್ರಬುದ್ದತೆಯ ಸಾಹಿತಿ ಪ್ರಚಾರಕ್ಕೆ ಬರಲಿ ಎಂದು ಕಿವಿಮಾತೇಳಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸಂಸ್ಥೆ ಮಾಜಿ ಗವರ್ನರ್ ನಾಗರಾಜು ಬಿ.ಭೈರಿ ಮಾತನಾಡಿ, ಹಿಂದೆ ಕವಿ ಮತ್ತು ಸಾಹಿತಿಗಳಿಗೆ ಪ್ರೋತ್ಸಾಹ ನೀಡಲು ರಾಜಾಶ್ರಯವಿತ್ತು. ಈಗ ಸರ್ಕಾರದ ಆಡಳಿತದಲ್ಲಿ ಆಶ್ರಯ ಕಡಿಮೆಯಾಗಿದೆ. ಕೆಲವು ಸಂಘ ಸಂಸ್ಥೆಗಳಿಂದ ವೇದಿಕೆ ಲಭ್ಯವಾಗುತ್ತಿದೆ. ಕನ್ನಡ ಭಾಷೆ ಅಭಿವೃದ್ದಿ ಮತ್ತು ಬೆಳೆವಣಿಗೆಯಲ್ಲಿ ಸಾಹಿತಿಗಳ ಪಾತ್ರವು ಮುಖ್ಯವಾಗಿದೆ. ಇಂದಿನ ಅತ್ಯಾಧುನಿಕ ಕಾಲಘಟ್ಟದಲ್ಲಿ ಸ್ಥಳೀಯ ಭಾಷೆಗಳ ಬಳಕೆ ಕಡಿಮೆಯಾಗುತ್ತಿದೆ. ಗುಣಮಟ್ಟದ ಸಾಹಿತ್ಯ ರಚನೆಯೂ ಇಲ್ಲವಾಗುತ್ತಿದೆ ಎಂದು ಹೇಳಿದರು.
ಜಗತ್ತಿನ ಯಾವ ಮೂಲೆಗೆ ಹೋದರೂ ಹಣ ಮತ್ತು ಮೊಬೈಲ್ ಇದ್ದರೆ ಸಾಕು. ಹೆಂಡತಿ, ಮಕ್ಕಳು, ಬಂಧು ಬಳಗದ ಅವಶ್ಯವೇ ಇಲ್ಲದಾಗುತ್ತಿದೆ. ತಂತ್ರಜ್ಞಾನ ಹೆಚ್ಚಾದಂತೆ ಮನುಷ್ಯ ಸಾಹಿತ್ಯ ಓದುವನ್ನು ಕಡಿಮೆ ಮಾಡಿದ್ದಾನೆ. ಇಂದಿನ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಪುಸ್ತಕಗಳು, ಬರವಣಿಗೆ ಬೇಕಾಗಿಲ್ಲ ಎನ್ನುವಂತಾಗಿದೆ. ಭಾಷಾಜ್ಞಾನ ಹೆಚ್ಚಳಕ್ಕೆ ಓದು ಅತ್ಯಾವಶ್ಯಕ. ವಿಜ್ಞಾನ-ವೈಜ್ಞಾನಿಕ ವಿಷಯಗಳ ಅರಿವಿಗೆ ಓದು ಅನಿವಾರ್ಯವಾಗಿದೆ ಎಂದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಕವಯತ್ರಿ ಲಲಿತಾ ಕೆ.ಆಚಾರ್ ವಹಿಸಿದ್ದರು. ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಟ್ರಸ್ಟ್ ಅಧ್ಯಕ್ಷ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿ, ಕಸಾಪ ನಗರಾಧ್ಯಕ್ಷೆ ಸುಜಾತಾ ಕೃಷ್ಣ, ಕಸಾಪ ಗೌರವ ಕಾರ್ಯದರ್ಶಿ ಹುಸ್ಕೂರು ಡಾ.ಕೃಷ್ಣೇಗೌಡ, ರಂಗಭೂಮಿ ಕಲಾವಿದ ಸಂಪಹಳ್ಳಿ ಬಸವರಾಜು ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 15ಕ್ಕೂ ಹೆಚ್ಚು ಜನರಿಗೆ ಅಭಿನಂದಿಸಲಾಯಿತು. ಅಂತೆಯೇ ವಿವಿಧೆಡೆಯಿಂದ ಆಗಮಿಸಿ ಕವಿಗಳು ಕವಿತೆ, ಕವನ ವಾಚಿಸಿದರು.