

ಮಂಡ್ಯ: ಆಧುನಿಕತೆಯ ಪ್ರಭಾವದಿಂದ ಜನಪದ ಹಾಗೂ ರಂಗಭೂಮಿ ಕಲೆ ಬಡವಾಗುತ್ತಿದೆ. ಇಂತಹ ಕಲೆ ಉಳಿಸಿಕೊಳ್ಳಲು ಸಾಂಸ್ಕೃತಿಕ ಲೋಕದ ವಾರಸುದಾರರಾದ ಸ್ಥಳೀಯ ಕಲಾವಿದರಿಗೆ ಉತ್ತೇಜನ ಸಿಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕಲಾವಿದರ ಪತ್ತಿನ ಸಹಕಾರ ಸಂಘ, ಜಾನಪದ ಪರಿಷತ್ ತಾಲೂಕು ಮತ್ತು ಜಿಲ್ಲಾ ಘಟಕ, ಕರ್ನಾಟಕ ಸಂಘ, ಜಿಲ್ಲಾ ಯುವ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲಾವಿದರಿಗೆ ನಾಡಿನ ಕಲೆ, ಸಂಸ್ಕೃತಿ ಉಳಿದಿದೆ. ಮೊಬೈಲ್ ಸಂಸ್ಕೃತಿಯಿಂದಲೂ ಕಲೆ ನಶಿಸುತ್ತಿದೆ. ಆಧುನಿಕತೆಯ ನಾಗಾಲೋಟದಲ್ಲಿ ಕಲೆಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸಾಹಸವೇ ಆಗಿದೆ. ಸ್ಥಳೀಯ ಜನಪದ, ರಂಗಭೂಮಿ ಕಲಾವಿದರಿಗೆ ಉತ್ತೇಜನ ನೀಡಬೇಕು. ಕಲಾವಿದರಾದ ಹುರುಗಲವಾಡಿ ರಾಮಯ್ಯ ಮತ್ತು ಮಂಜುಳಾ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಗೌರವ ಹೆಚ್ಚಿದೆ. ಇವರು ಎಷ್ಟೋ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಇಂತಹ ಕಲಾವಿದರನ್ನು ಗುರುತಿಸಿರುವುದು ಸಂತಸದ ವಿಷಯ. ನಾಟಕ ಕಲೆ ಪ್ರದರ್ಶನ ಮಾಡಿಕೊಂಡು ಕಲೆ ಉಳಿಸಿಕೊಂಡು ಹೋಗುತ್ತಿರುವ ಇವರ ಕಾರ್ಯ ಮತ್ತಷ್ಟು ಹೆಚ್ಚಬೇಕು ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಜಾನಪದ ಕಲೆಯು ಎಲ್ಲರನ್ನು ಸೆರೆ ಹಿಡಿಯುತ್ತದೆ. ಏಕೆಂದರೆ ಅದು ಸರಳ ಭಾಷೆಯಲ್ಲಿದೆ. ಜನಪದವು ಎಲ್ಲರಿಗೂ ಅರ್ಥವಾಗುತ್ತದೆ. ಹಲವು ಕಲಾವಿದರಿಗೆ ಅವಕಾಶಗಳೇ ಸಿಗುವುದಿಲ್ಲ. ಅವರಿಗೆ ಅವಕಾಶಗಳು ಸಿಗುವಂತಾಗಬೇಕು. ರಾಮಯ್ಯ ಅವರು ಉತ್ತಮ ಕಲಾವಿದ. ಇವರು ಹೋರಾಟದ ಹಾಡುಗಾರರಾಗಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಲೇಖಕಿಯ ಸಂಘದ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವ ಇತರರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹುರುಗಲವಾಡಿ ರಾಮಯ್ಯ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಮಂಜುಳಾ ಆಲದಹಳ್ಳಿ, ರಾಷ್ಟ್ರೀಯ ಯುವಜನೋತ್ಸವ ಜಾನಪದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕೆವಿಎಸ್ ಯುವಜನ ಸಂಘದ ಪ್ರದೀಪ್ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕೀಲಾರದ ಶಿವರುದ್ರ ಮತ್ತು ತಂಡವನ್ನು ಅಭಿನಂದಿಸಲಾಯಿತು.