

ಮಂಡ್ಯ: ಬೇರು ಭೂಮಿ ಕಡೆ ಮುಖ ಮಾಡಿದರೆ ಚಿಗುರು ಆಕಾಶದ ಕಡೆಗೆ ಮುಖ ಮಾಡುತ್ತದೆ. ಡಿವಿಜಿ ಅವರು ಹೊಸ ಚಿಗುರು ಹಳೇ ಬೇರು ಕೂಡಿದರೆ ಮರ ಸೊಬಗು ಎಂದು ಹೇಳಿದ್ದರೆ, ಹಾಡು ಹಳೆಯದಾದರೇನು ಭಾವ ನವನವೀನ ಎನ್ನುತ್ತಾರೆ ಜಿಎಸ್‌ಎಸ್. ನನ್ನ ದೃಷ್ಟಿಯಲ್ಲಿ ಹಳೇ ದೇಹ ಹೊಸ ಮನಸ್ಸು ಕೂಡಿದರೆ ಜೀವನ ಸೊಗಸು ಎಂದು ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನ ಶೈಕ್ಷಣಿಕ ಪಾಲುದಾರ ಮಂಜು ಮುತ್ತೆಗೆರೆ ತಿಳಿಸಿದರು.
ನಗರದ ಸ್ಕಿಲ್‌ಫರ್ನ್ ಮಲ್ಟಿಮೀಡಿಯ ಅಕಾಡೆಮಿ ಸಭಾಂಗಣದಲ್ಲಿ ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್, ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಹಳೆ ಬೇರು-ಹೊಸ ಚಿಗುರು ಕಾವ್ಯ ಚಿಂತನೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ಚಿಂತನೆಯ ಈ ಕಾರ್ಯಕ್ರಮಕ್ಕೆ ಹಳೇ ಬೇರು ಹೊಸ ಚಿಗುರು ಶೀರ್ಷಿಕೆಯನ್ನು ನೀಡಿ ಹಿರಿಯ ಕವಿಗಳು ಹಾಗೂ ಯುವ ಕವಿಗಳನ್ನು ಒಂದೆಡೆ ಸೇರಿಸಿ, ಕಾವ್ಯ ಪರಂಪರೆಯ ಉಪನ್ಯಾಸವನ್ನು ಬೆಸೆಯಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಮಾತನಾಡಿ, ಕವಿತೆ ರಚನೆಯಲ್ಲಿ ಪ್ರಾಸಕ್ಕೆ ಗಂಟು ಬಿದ್ದರೆ ಉತ್ತಮ ಕವಿತೆಯಾಗದು. ಹೆಚ್ಚು ಅಧ್ಯಯನ ಹಾಗೂ ಅನುಭವದ ನೆಲೆಯಲ್ಲಿ ಉತ್ತಮ ಕವಿತೆ ರಚನೆಯಾಗುವುದು. ರೋಷನ್ ಛೋಪ್ರಾ ಅವರ ಚುಟುಕು ಕಚಗುಳಿ ಇಟ್ಟಿವೆ. ಇಂದು ಸಾಮಾಜಿಕ ಜಾಲತಾಣ ಮಾನವೀಯತೆಯನ್ನು ಜಾಲಾಡಿವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಾತನಾಡುವ ಈ ಕಾರ್ಯಕ್ರಮ ವಿಶೇಷ ಅನುಭವ ತಂದುಕೊಟ್ಟಿದೆ ಎಂದು ತಿಳಿಸಿದರು.
ಕನ್ನಡ ಕಾವ್ಯ ಪರಂಪರೆ- ಒಂದು ಅವಲೋಕನ ಕುರಿತು ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ನಾಗರಾಜ್ ಸಬ್ಬನಹಳ್ಳಿ ವಿಶೇಷ ಉಪನ್ಯಾಸ ನೀಡಿದರು. ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ವಿಕಾಸ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ದ.ಕೋ.ಹಳ್ಳಿ, ಲೇಖಕಿ ಶುಭಶ್ರೀ ಪ್ರಸಾದ್, ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷ ಕೆ.ಸಿ.ಲೋಕೇಶ್, ವಕೀಲ ದೇವರಾಜ್ ಎಸ್.ಪಂಡಿತ್, ಉಪನ್ಯಾಸಕಿ ವೈ.ಸಿ.ದಾಕ್ಷಾಯಿಣಿ, ನಿವೃತ್ತ ಕನ್ನಡ ಉಪನ್ಯಾಸಕ ನಾಗರಾಜು, ಆರ್‌ಎಪಿಸಿಎಂಎಸ್ ಲೆಕ್ಕಿಗ ಪ್ರಕಾಶ್‌ಕಟ್ಟೆ ಇತರರಿದ್ದರು.
ಇದೇ ವೇಳೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಜು ಕೊತ್ತತ್ತಿ ಅವರನ್ನು ಅಭಿನಂದಿಸಲಾಯಿತು. ಗಾಮನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕೊತ್ತತ್ತಿ ಮಹಾದೇವ್ ಗೀತೆಗಳನ್ನು ಹಾಡಿದರು.