

ಮಂಡ್ಯ: ಸಂಬಂಧ ಕಟ್ಟಿಕೊಡುವ ಮತ್ತು ಸಮಾಜವನ್ನು ಕಟ್ಟುವ ಕಲಾಶಕ್ತಿ ಜಾನಪದಕ್ಕೆ ಇದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ನಗರದ ಗಾಂಧಿಭವನದಲ್ಲಿ ಜನಕಲಾರಂಗ, ಜಿಲ್ಲಾ ಕಲಾವಿದರ ಬಳಗ ಮತ್ತು ಜನಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಿನಿಮಾ, ಟಿ.ವಿ ಮತ್ತು ಮೊಬೈಲ್ ಮಾಯಾಲೋಕದಲ್ಲಿ ತೇಲಿಸುವುದನ್ನು ಬಿಟ್ಟು ಜಾನಪದ ಸಂಸ್ಕೃತಿಯಿಂದ ನಮ್ಮ ಪರಂಪರೆಯನ್ನು ಪರಿಚಯಿಸಿ ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಮಾಯಾಲೋಕವನ್ನು ಅಪ್ಪಿಕೊಳ್ಳುತ್ತಾ, ನಮ್ಮದಲ್ಲದ ಲೋಕವನ್ನು ಬೆಳೆಸುವ ಅಪಾಯದ ಪ್ರಯತ್ನಗಳು ನಡೆಯುತ್ತಿರುವ ದಿನಗಳಲ್ಲಿ ಜಾನಪದ ಸಂಸ್ಕೃತಿಯ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಲು ಸಾಧ್ಯ. ಸಂತರು, ಶರಣರು, ದಾಸರು ಮತ್ತು ಜಾನಪದೀಯರು ನಮ್ಮ ಮಕ್ಕಳ ಮನಸ್ಸಿನಲ್ಲಿ ಇಲ್ಲ. ಮಹನೀಯರ ಮರು ಪ್ರವೇಶ ಮಾಡಿದ್ದರೆ ದೇಶಕ್ಕೆ ಉಳಿಗಾಲವೂ ಇಲ್ಲ. ಮಕ್ಕಳಿಗೆ ಊರು, ಕೆರೆ, ತೋಪು, ಹೊಲ, ಗದ್ದೆ, ಜಾತ್ರೆ, ಹಬ್ಬ, ತಾತ, ಅಜ್ಜಿಯ ಪರಿಚಯ ಮಾಡುತ್ತಲೇ ನೆಲದ ಸಂಸ್ಕೃತಿ ಉಳಿಸಿಕೊಂಡು ಭವಿಷ್ಯದ ಪ್ರಜೆಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಚಿಂತಕ ಇಂದೂಧರ ಹೊನ್ನಾಪುರ ಮಾತನಾಡಿ, ಸಾಂಸ್ಕೃತಿಕತೆ, ನೈತಿಕತೆ ಮತ್ತು ವೈಜ್ಞಾನಿಕವಾದ ಧಾರ್ಮಿಕತೆ ಇಲ್ಲದೆ ಇಂದಿನ ಸಾಮಾಜಿಕ ಚಳವಳಿ ಸೋತು ಸೊರಗುತ್ತಿವೆ. ಭವಿಷ್ಯದ ದೃಷ್ಠಿಯಿಂದ ದಲಿತ-ರೈತ ಸೇರಿದಂತೆ ವಿವಿಧ ಚಳವಳಿಗಳ ಪುನರುತ್ಥಾನ ಆಗಬೇಕು ಎಂದರು.
ರೈತ ನಾಯಕಿ ಅನುಸೂಯಮ್ಮ ಸಮಾರಂಭ ಉದ್ಘಾಟಿಸಿದರು. ರೈತ ನಾಯಕಿ ಸುನಂದಾ ಜಯರಾಂ, ನಿವೃತ್ತ ಪ್ರಾಂಶುಪಾಲ ಜಿ.ಎಸ್.ಚಂದ್ರಶೇಖರನ್, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಜನಕಲಾರಂಗ ಸಂಸ್ಥೆಯ ಅಧ್ಯಕ್ಷ ಹುರುಗಲವಾಡಿ ರಾಮಯ್ಯ, ಕೀಲಾರ ಕೃಷ್ಣೇಗೌಡ, ಕಾರಸವಾಡಿ ಮಹದೇವು, ಚಾಮನಹಳ್ಳಿ ಮಂಜು, ಕೆ.ದೇವರಾಜ್, ಮಂಜುಳಾ, ಗಾಮನಹಳ್ಳಿ ಸ್ವಾಮಿ ಇತರರಿದ್ದರು. ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಂಜೇಶ್ ಚನ್ನಾಪುರ, ಡಾ.ಕೆಂಪಮ್ಮ ಅವರನ್ನು ಅಭಿನಂದಿಸಲಾಯಿತು.