ಲಂಚ ತೆಗೆದುಕೊಳ್ಳದೇ ಕೆಲಸ ಮಾಡಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

Congratulatory ceremony mandya
Published on

ಮಂಡ್ಯ: ಯಾವುದೇ ಕೆಲಸಗಾರರು ಸಮಾಜ ಮೆಚ್ಚಿಸುವಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಹತ್ತು ಜನರಲ್ಲಿ ನಮ್ಮ ಪರವಾಗಿ ಎಂಟು ಜನರಿದ್ದರೆ, ಉಳಿದಿಬ್ಬರು ದೂರು ಹೇಳಿಕೊಂಡೇ ಹೆಸರು ಹಾಳು ಮಾಡುತ್ತಾರೆ?. ಅವರ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಾಮಾಣಿಕವಾಗಿ ಲಂಚ ತೆಗೆದುಕೊಳ್ಳದೇ ಕೆಲಸ ಮಾಡುವ ಮನೋಭಾವವನ್ನು ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಬೆಳೆಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.

ನಗರದ ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್‌ನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಟ್ರಸ್ಟ್‌ನಲ್ಲಿ ತರಬೇತಿ ಪಡೆದ ಸರ್ಕಾರಿ ವಿವಿಧ ಹುದ್ದೆ ಪಡೆದ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕೆಲಸದಲ್ಲಿ ನಿಷ್ಠೆಯಿಲ್ಲ ಎಂದರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ರೈತರ ಕೆಲಸಗಳನ್ನು ತಪ್ಪದೇ ಮಾಡಿಕೊಡಬೇಕು. ಸರ್ಕಾರಿ ಕೆಲಸಕ್ಕೆ ಬಂದಿರುವುದು ನಾವು ಸಂತೋಷ ಪಟ್ಟುಕೊಂಡು ಹೋಗುವುದಕ್ಕಲ್ಲ ಎಂಬುದನ್ನು ನೌಕರರು ಅರಿತುಕೊಳ್ಳಬೇಕು. ಏಕೆಂದರೆ ನಾವು ನಿಷ್ಠೆಯಿಂದ ಇದ್ದರೆ ಅಪ್ರಮಾಣಿಕತೆಯು ಕೆಲವು ಸಾರಿ ಕೈಹಿಡಿಯುತ್ತದೆ?. ಹಾಗಾಗಿ ಕೆಲವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಟ್ರಸ್ಟ್‌ನ ಕಾರ್ಯಾಧ್ಯಕ್ಷ ರಾಮಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಒತ್ತು ನೀಡುವುದು ಮುಖ್ಯವಾಗಬೇಕು. ನಮ್ಮ ಟ್ರಸ್ಟ್‌ನ ಉದ್ದೇಶವು ಸಹ ಪ್ರತಿಯೊಂದು ಗ್ರಾಮದಲ್ಲಿಯೂ ಒಬ್ಬ ಐಎಎಸ್ ಅಧಿಕಾರಿ ಸಿಗಬೇಕು ಎಂಬುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿದ್ದೇವೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಮಾದಯ್ಯ, ಕಾರ್ಯದರ್ಶಿ ಕೆ.ಬಿ.ಬೋರಯ್ಯ, ಜಂಟಿ ಕಾರ್ಯದರ್ಶಿ ಎಸ್.ಟಿ.ರಾಮಚಂದ್ರ, ಖಜಾಂಚಿ ಎಸ್.ಲೋಕೇಶ್, ಧರ್ಮದರ್ಶಿ ಸಿ.ಎಲ್.ನಂಜರಾಜು, ಶೈಕ್ಷಣಿಕ ಸಂಯೋಜಕ ಎಚ್.ಡಿ.ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಡಿ.ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net