ಹಾಲು ಉತ್ಪಾದಕರಿಗೆ ಸರ್ಕಾರ ವಿಶೇಷ ಅನುದಾನ ನೀಡಲಿ

Hainu 1
Published on

ಉಡುಪಿಯಲ್ಲಿ ಡಾ. ಎಂ.ಎನ್​. ರಾಜೇಂದ್ರಕುಮಾರ್​ ಆಗ್ರಹ

ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟದ ಸಮಾರಂಭ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಹಾಕು ಉತ್ಪಾದನಾ ವೆಚ್ಚ ಅತ್ಯಂತ ಹೆಚ್ಚಿದೆ. ಹೀಗಾಗಿ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹೈನುಗಾರರಿಗೆ ಸರ್ಕಾರ ವಿಶೇಷ ಅನುದಾನ ನೀಡಿ ಸಹಕರಿಸಬೇಕು. ಹೈನುಗಾರಿಕಾ ಘನೌಕರರ ಆರೋಗ್ಯ ಕಾಳಜಿಯೂ ಮುಖ್ಯವಾಗಿದ್ದು ಸಂಘಟನೆ ಆದ್ಯತೆ ನೀಡಬೇಕು. ಅವರ ಆರೋಗ್ಯ ವಿಮೆಗಾಗಿ ಸಹಕಾರಿ ಸಂಘದಿಂದ 10 ಲಕ್ಷ ರೂ. ಕೊಡುಗೆ ನೀಡುವುದಾಗಿ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳಿಯ ಅಧ್ಯಕ್ಷ ಡಾ. ಎಂ.ಎನ್​. ರಾಜೇಂದ್ರಕುಮಾರ್​ ಭರವಸೆ ನೀಡಿದರು.

Hainu 2
ಉಡುಪಿಯ ಪುರಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಬ್ಬಂದಿ ಕೊಡುವಿಕೆಯಲ್ಲಿ ಉಡುಪಿ ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟದ ವತಿಯಿಂದ ಜುಲೈ 26ರಂದು ಬೆಳಗ್ಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದನ ಖರೀದಿಗೆ ಸಾಲ

ಹೈನುಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದನ ಖರೀದಿಸಲು ಆಸಕ್ತರಾದವರಿಗೆ ಸಹಕಾರಿ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೊಡಿಸಲಾಗುವುದು. ತಾವುಗಳೂ ಸಹ ತಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕು. ನೌಕರರಿಗೆ ಹೆಚ್ಚಿನ ವೇತನ ಕೊಡುವಂತಾಗಲು ಅವರಿಗೆ ಇನ್ನಿತರ ಕೆಲಸ ಕಾರ್ಯಗಳ ಜವಾಬ್ದಾರಿ ವಹಿಸಬೇಕು ಎಂದು ರಾಜೇಂದ್ರಕುಮಾರ್​ ಸಲಹೆ ನೀಡಿದರು.

 ಹೈನುಗಾರರು ಸಂಘಟಿತರಾಗಿ

ಉಡುಪಿ ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟದ ಮುಖಂಡ ವಿಠ್ಠಲ ಶೆಟ್ಟಿ ಶೇಡಿಕೊಡ್ಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಇಲ್ಲದೆ ಏನನ್ನೂ ಸಾಧಿಸಲಾಗದು. ಹೀಗಾಗಿ ಎಲ್ಲ ಹೈನುಗಾರರು 100 ರೂ. ನೋಂದಣಿ ಶುಲ್ಕ ಕೊಟ್ಟು ಹೈನುಗಾರ ಪರಿವಾರ ಒಕ್ಕೂಟದ ಸದಸ್ಯತ್ವ ಪಡೆಯಬೇಕು. ಈ ಸಂಘಟನೆಯನ್ನು ಉಳಿಸಿ, ಬೆಳೆಸುವುದು ಇನ್ನು ನಿಮ್ಮ ಜವಾಬ್ದಾರಿ ಎಂದರು.

ಸಹಕಾರಿ ಸಾಧಕರಿಗೆ ಸನ್ಮಾನ

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರಿನ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ, ಉಪಾಧ್ಯಕ್ಷ ಉದಯ ಕೋಟ್ಯಾನ್​, ನಿರ್ದೇಶಕರಾದ ಬೆಳಪು ದೇವಿಪ್ರಸಾದ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಸುಚರಿತ ಶೆಟ್ಟಿ, ಮಂಜಯ್ಯ ಶೆಟ್ಟಿ, ಸುಧಾಕರ ಶೆಟ್ಟಿ, ಮಮತಾ ಶೆಟ್ಟಿ ಹದ್ದೂರು ಇವರನ್ನು ಸನ್ಮಾನಿಸಲಾಯಿತು.

ಒಕ್ಕೂಟಕ್ಕೆ ಅನ್ಯರ ಸದಸ್ಯತ್ವ ಬೇಡ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರಿನ ಮಾಜಿ ಅಧ್ಯಕ್ಷ ಜಗದೀಶ ಕಾರಂತ ಮಾತನಾಡಿ, ಮಾತನಾಡಿದಷ್ಟು ಸುಲಭವಾಗಿ ಹೈನುಗಾರಿಕೆ ಮಾಡಲಾಗದು. ಹೈನುಗಾರರು ಹಾಗೂ ಹಾಲು ಉತ್ಪಾದಕರು ನಮ್ಮ ಒಕ್ಕೂಟದ ಮೂಲ. ಆದರೆ, ಹೈನುಗಾರರು ಅಲ್ಲದವರೂ ಸಹ ಒಕ್ಕೂಟಕ್ಕೆ ಸೇರುತ್ತಿದ್ದಾರೆ. ಸಂಘಕ್ಕೆ ಹಾಲು ಕೊಡದ ಯಾರನ್ನೂ ಒಕ್ಕೂಟದ ಸದಸ್ಯರನ್ನಾಗಿ ಮಾಡಬಾರದು. ಇಲ್ಲಿಯೂ ರಾಜಕೀಯ ಬೇಡ. ಸಂಘದ ಕಾರ್ಯದರ್ಶಿ ಯಾರ ಭಯಕ್ಕೂ ಒಳಗಾಗುವ ಅಗತ್ಯತೆ ಇಲ್ಲ ಎಂದರು.

ಸಂವಾದ ಕಾರ್ಯಕ್ರಮ

ಸಭೆಯ ಆರಂಭದಲ್ಲಿ ಉಭಯ ಜಿಲ್ಲೆಗಳ ಹೈನುಗಾರಿಕೆಯನ್ನು ಲಾಭದಾಯಕದೊಂದಿಗೆ ಜನಪ್ರಿಯಗೊಳಿಸಲು, ನಿರಂತರ ಹೋರಾಟ, ನಿತ್ಯದ ಬದುಕು-ಬವಣೆ, ಕಷ್ಟ-ಸುಖ ಹಾಗೂ ಸವಾಲು-ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.

ಮಂಗಳೂರು ಜಿಲ್ಲಾ ಪ್ರಾಥಮಿಕ ಹಾಲು ಉತ್ಪಾದಕರ ನೌಕರರ ಒಕ್ಕೂಟದ ಸುಲೇಖಾ ಶೆಟ್ಟಿ ಕೈಲ್ಕೆರೆ, ಡಾ. ರವಿರಾಜ ಉಡುಪ ಉಪಸ್ಥಿತರಿದ್ದರು. ಸುಜಾತಾ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಕೆ. ವಂದಿಸಿದರು.

ಒಕ್ಕೂಟವನ್ನು ಸುವ್ಯವಸ್ಥಿತವಾಗಿ ಮುನ್ನಡೆಸಲು ಹಾಲು ಮಾರಾಟ ದರವನ್ನು 2 ರೂ.ಗೆ ಹೆಚ್ಚಿಸಬೇಕಿದೆ. ಲೀಟ್​ರಗೆ 5 ಪೈಸೆ ಮೊತ್ತವನ್ನು ನೌಕರರ ಕಲ್ಯಾನ ನಿಧಿಗೆ ನೀಡಬೇಕೆಂಬ ಬೇಡಿಕೆಯಿದ್ದು, ಆ ಕುರಿತು ಸಕಾರಾತ್ಮವಾಗಿ ಕ್ರಮ ಕೈಗೊಳ್ಳಲಾಗುವುದು. ಸಂಘಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಬೇಕಿದ್ದು, ಹೈನುಗಾರರೂ ಸಹ ಹಾಲು ನೀಡುವ ಪ್ರಮಾಣ ಹೆಚ್ಚಿಸಬೇಕು. | ಕೆ.ರವಿರಾಜ ಹೆಗ್ಡೆ. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರಿನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net