

ಮಂಡ್ಯ: ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಗಳಿಸಿರುವ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಆ.5ರಂದು ಮುಕ್ತಾಯಗೊಂಡ ಹಳೇಬೂದನೂರು ವೃತ್ತದ 17 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಜತೆಗೆ, ವೈಯಕ್ತಿಕ ವಿಭಾಗದಲ್ಲಿ 14 ಜನ ಬಹುಮಾನ ಪಡೆಯುವ ಜತೆಗೆ ರಿಲೇ, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, ಖೋಖೋ ಪಂದ್ಯಗಳಲ್ಲೂ ಜಯಗಳಿಸಿದ್ದರು.
ಈ ಹಿನ್ನಲೆಯಲ್ಲಿ ಅಷ್ಟೂ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಶೇಷವಾಗಿ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಮಕ್ಕಳ ಮುಂದಿನ ಸಾಧನೆಗೆ ಪೂರಕವಾಗಿ ಅತಿಥಿ ಗಣ್ಯರು ತಮ್ಮ ಭಾಷಣದಲ್ಲಿ ಪ್ರೇರಣದಾಯಕ ಮಾತುಗಳ ಮೂಲಕ ಹುರಿದುಂಬಿಸಿದರು. ಶಿಕ್ಷಣದ ಜತೆ ಜತೆಯಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆ ಮರೆಯಬೇಕು. ಪದೇ ಪದೇ ಕ್ರೀಡೆಗಳನ್ನು ಬದಲಿಸುವ ಬದಲು ಒಂದೇ ಕ್ರೀಡೆಯಲ್ಲಿ ನಿರಂತರ ಪರಿಶ್ರಮದೊಂದಿಗೆ ಸಾಧನೆಯ ಹಾದಿಯಲ್ಲಿ ಸಾಗಬೇಕೆಂದು ಬೆನ್ನುತಟ್ಟಿದರು.
ಶೈಕ್ಷಣಿಕ ಸಾಧನೆಯ ಜತೆಗೆ ಕ್ರೀಡಾ ಸಾಧನೆಯಿಂದಲೂ ಕ್ರೀಡಾ ಕೋಟಾದಡಿ ಉದ್ಯೋಗ ದೊರೆಯಲಿದೆ. ಈ ನಿಟ್ಟಿನಲ್ಲೂ ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು. ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ತಮ್ಮನ್ನು ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳದೆ ಹುಟ್ಟು-ಸಾವಿನ ನಡುವೆ ಏನಾದರೂ ಸಾಧಿಸಬೇಕೆಂದು ಹುರುಪು ತುಂಬಿದರು. ಇದೇ ವೇಳೆ ಗೋಪಾಲಪುರ ಗ್ರಾಮದಿಂದ ಚಿಕ್ಕಮಂಡ್ಯ ಶಾಲೆಗೆ ನಿತ್ಯ ನಡೆದುಕೊಂಡೇ ಬರುತ್ತಿದ್ದ ಬಡ ವಿದ್ಯಾರ್ಥಿನಿ ಕೃತಿಕಾ ಅವರಿಗೆ ಉಚಿತವಾಗಿ ಬೈಸಿಕಲ್ ವಿತರಿಸಲಾಯಿತು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ವೈಯಕ್ತಿಕ ವೆಚ್ಚದಲ್ಲಿ ಬೈಸಿಕಲ್ ಕೊಡಿಸಿ ವಿದ್ಯಾರ್ಥಿನಿ ಕೃತಿಕಾಳನ್ನು ಪ್ರೋತ್ಸಾಹಿಸಿದರು.
ಬಳಿಕ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮುಖ್ಯ. ಎದುರಾಳಿಗಳು ಪ್ರಬಲವಾಗಿದ್ದಾಗ ಮಾತ್ರ ನಮ್ಮ ಸಾಮರ್ಥ್ಯ ತಿಳಿಯುತ್ತದೆ. ಪದೇ ಪದೇ ಕ್ರೀಡೆಗಳನ್ನು ಬದಲಿಸದೆ ಒಂದೇ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಅದರಲ್ಲೇ ನಿರಂತರ ಪ್ರಯತ್ನ ಮಾಡಿ ಸಾಧನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಹಿರಿಯ ವಿದ್ಯಾರ್ಥಿಗಳಾದ ಪತ್ರಕರ್ತ ನವೀನ್ ಚಿಕ್ಕಮಂಡ್ಯ ಹಾಗೂ ವೈದ್ಯ ವಿದ್ಯಾರ್ಥಿ ಧನುಷ್‌ಗೌಡ ಅವರನ್ನು ಅಭಿನಂದಿಸಲಾಯಿತು. ಉಪನ್ಯಾಸಕ ರಾಜೇಂದ್ರಸಿಂಗ್‌ಬಾಬು, ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥ ಅರವಿಂದ ಪ್ರಭು, ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಂ.ಮಹೇಶ್, ಮುಖ್ಯಶಿಕ್ಷಕ ಎಚ್.ಎನ್.ದೇವರಾಜು, ದೈಹಿಕ ಶಿಕ್ಷಣ ಶಿಕ್ಷಕ ಚಂದನ್, ಶಿಕ್ಷಕರಾದ ಬಸವರಾಜು, ಶ್ರೀಧರಮೂರ್ತಿ, ಭಾಗ್ಯಮ್ಮ, ಅಣ್ಣೇಗೌಡ, ರವಿಶಂಕರ್, ಯೋಗಾಮಣಿ, ಪಿ.ಕೆ.ಪನ್ನಗ, ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣ ವಿದ್ಯಾರ್ಥಿಗಳಾದ ಹರೀಶ್, ಅಂಕಿತ್, ವರ್ಷಿಣಿ, ವೈಷ್ಣವಿ, ಯಶಸ್ವಿನಿ, ಯಮುನಾ, ಗ್ರಾಮದ ಮಹಿಳಾ ಮುಖಂಡರಾದ ಪ್ರಭಾವತಿ, ಯುವ ಮುಖಂಡ ಪ್ರತಾಪ್ ಭಾಗವಹಿಸಿದ್ದರು.