

ಮಂಡ್ಯ: ಅಧಿಕಾರಿಗಳು ಜನರನ್ನು ಕಚೇರಿಗಳಿಗೆ ಅಲೆದಾಡಿಸದೇ ಸೌಲಭ್ಯಗಳನ್ನು ಜನರಿಗೆ ತಲುಪಿಸಿದರಷ್ಟೇ ಸರ್ಕಾರಕ್ಕೆ ಗೌರವ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ವೃಂದ ಸಂಘಗಳ ವತಿಯಿಂದ ಆಯೋಜಿಸಿದ್ದ ನೂತನ ಸಚಿವರ ಹಾಗೂ ಜಿಲ್ಲೆಯ ಎಲ್ಲ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ನಮಗೆ ಕೆಟ್ಟ ಹೆಸರು ಬರುತ್ತದೆ ಎಂಬುದನ್ನು ಮನಗಂಡು ಕಾರ್ಯ ನಿರ್ವಹಿಸಬೇಕೆಂದರು.
ಅಭಿವೃದ್ಧಿ ವಿಚಾರದಲ್ಲಿ ಕಳೆದ ಐದು ವರ್ಷದಿಂದ ಏನೂ ಬದಲಾವಣೆಯಾಗಿಲ್ಲ ಎಂಬ ಅನಿಸಿಕೆ ವ್ಯಾಪಕವಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಹಜವಾಗಿ ನೀವು ಆಡಳಿತದ ಜತೆಗಿರಬೇಕು. ಅಧಿಕಾರಿಗಳು ಜನರಿಗೆ ಎಷ್ಟರಮಟ್ಟಿಗೆ ಸ್ಪಂದಿಸುತ್ತೀರೊ ಅಷ್ಟೂ ಸರ್ಕಾಕ್ಕೆ ಒಳ್ಳೆಯ ಹೆಸರು ಬರುತ್ತದೆ. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಮುಟ್ಟುತ್ತವೆ. ಜನರನ್ನು ಅಲೆದಾಡಿಸಿ ಕಿರುಕುಳ ಕೊಟ್ಟರೆ ಕಳಂಕ ಬರುತ್ತದೆ. ಆದ್ದರಿಂದ ನನಗೆ ಮಾಡಿರುವ ಸನ್ಮಾನಕ್ಕೆ ಅರ್ಥ ಬರಬೇಕಾದರೆ ನೀವು ಜನಪರ ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಈಗಾಗಲೇ ನಿಮ್ಮ ಎಲ್ಲ ಬೇಡಿಕೆಗಳ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಅವರು ಪಟ್ಟಿ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಶಿಕ್ಷಕರ ಸಂಘದ ಬೇಡಿಕೆ ಕುರಿತು ಸರ್ಕಾರಕ್ಕೆ ಸಹಾನುಭೂತಿ ಇದೆ. ಈಗಾಗಲೇ ಮೇಲ್ಮನೆಯಲ್ಲಿ ಚರ್ಚೆ ನಡೆದು 7ನೇ ವೇತನ ಆಯೋಗದ ಶಿಫಾರಸನ್ನು ಯಥಾವತಾಗಿ ಜಾರಿಗೆ ಒತ್ತಾಯಿಸಲಾಗಿದೆ. ಒಪಿಎಸ್ ಜಾರಿಗೆ ನಾಲ್ಕು ರಾಜ್ಯಗಳಲ್ಲಿ ಅನುಷ್ಠಾನವಾಗಿರುವ ವರದಿಯನ್ನು ಸರ್ಕಾರ ಕೂಡ ಪರಿಶಿಲಿಸಲಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್, ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ, ಶಿಕ್ಷಕರ ಫೆಡರೇಷನ್‌ನ ನಾರಾಯಣಸ್ವಾಮಿ, ಚಂದ್ರಶೇಖರ್ ನುಗ್ಗಲಿ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಕಾಂಗ್ರೆಸ್ ಮುಖಂಡ ಚಿದಂಬರ್ ಇತರರಿದ್ದರು. ಇದೇ ವೇಳೆ ಸಚಿವರು, ಶಾಸಕರು ಹಾಗೂ ಎಂಎಲ್‌ಸಿಗಳನ್ನು ಅಭಿನಂದಿಸಲಾಯಿತು.