

ಮಂಡ್ಯ: ಮೊಬೈಲ್‌ನಿಂದ ಮಕ್ಕಳು ಹೊರಬಂದು ಬುದ್ದಿಶಕ್ತಿಯನ್ನು ಹೆಚ್ಚಿಸುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಅಗತ್ಯತೆ ಇದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದ ನೂರಡಿ ರಸ್ತೆಯಲ್ಲಿರುವ ಅರುವಿ ಟ್ರಸ್ಟ್‌ನಲ್ಲಿ ವಿನೂಸ್ ಅಕಾಡೆಮಿ ಸಹಯೋಗದಲ್ಲಿ ವತಿಯಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಅಭಿನಂದನೆ ಹಾಗೂ ವಿನೂಸ್ ಅಕಾಡೆಮಿಯ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಮಕ್ಕಳು ಇತ್ತೀಚೆಗೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಾರಿಣಾಮಗಳು ಬೀರುತ್ತವೆ. ಆದ್ದರಿಂದ ಪಾಲಕರು ಮಕ್ಕಳನ್ನು ಬುದ್ದಿ ಶಕ್ತಿ ಹೆಚ್ಚಿಸುವ ಚೆಸ್, ಅಬಾಕಸ್, ಕೈ ಬರಹದಂತಹ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಿಪಿಸಬೇಕಿದೆ. ಮಕ್ಕಳೇ ಮಂದಿನ ಭವಿಷ್ಯದ ಪ್ರಜೆಗಳು. ಆದ್ದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದ ಜತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸುವ ಅಗತ್ಯತೆ ಇದೆ. ತಾಂತ್ರಿಕ ಯುಗದಲ್ಲಿ ನಾವಿದ್ದೇವೆ. ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಸಲಹೆ ನೀಡಿದರು.
ತಾಂತ್ರಿಕ ಜ್ಞಾನವನ್ನು ಉಪಯೋಗಿಸಿಕೊಳ್ಳಬೇಕು. ಒಳ್ಳೆಯ ಆಲೋಚನೆಗಳೊಂದಿಗೆ ಗುರಿ ಸಾಧನೆಗೆ ಮುಂದಾಗಬೇಕು. ಮಕ್ಕಳನ್ನು ಹೊಸ ಹೊಸ ಅನ್ವೇಷಣೆಗೆ ಕೊಂಡೊಯ್ಯಬೇಕು. ಅದು ಅವರನ್ನು ಹೊಸ ಹೊಸ ದಿಕ್ಕಿಗೆ ಕರೆದೊಯ್ಯುತ್ತದೆ. ಆಗ ಆ ವಿದ್ಯೆ ಸಾರ್ಥಕಗೊಳ್ಳುತ್ತದೆ. ಚದುರಂಗದಾಟ(ಚೆಸ್)ದಲ್ಲಿ ಭಾರತ ಎರಡು ವಿಶ್ವಚೆಸ್ ಚಾಂಪಿಯನ್ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಹ ಸಾಧಕರನ್ನು ಪ್ರತಿಯೊಬ್ಬರೂ ಮಾದರಿಯಾಗಿ ತೆಗೆದುಕೊಳ್ಳಬೇಕು. ಅವರ ಹಾದಿಯಲ್ಲಿ ನಡೆಯಬೇಕು. ಆಗ ದೇಶಕ್ಕೆ ಕೀರ್ತಿ ತಂದಂತಾಗುತ್ತದೆ. ಏನಾದರೂ ಸಾಧನೆ ಮಾಡುತ್ತೇನೆ ಎಂದು ಆಶಾಭಾವನೆ ಇರಬೇಕು. ಸತತ ಪ್ರಯತ್ನಪಟ್ಟರೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಮಾತನಾಡಿ, ಮಕ್ಕಳಿಗೆ ಕಥೆ ಪುಸ್ತಕ ಹಾಗೂ ಪಠ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿ, ಇದರಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಬೆಳೆಯುತ್ತದೆ. ಶೈಕ್ಷಣಿಕ ಪೂರಕ ಮಾಹಿತಿಗೆ ಮೊಬೈಲ್ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಶೈಕ್ಷಣಿಕ ಮಾಹಿತಿಗಷ್ಟೇ ಉಪಯೋಗಿಸಿ. ಪಾಲಕರ ಮಾತನ್ನು ತಪ್ಪದೇ ಕೇಳಿ ಎಂದು ಸಲಹೆ ನೀಡಿದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಕಲಾವಿದ ವೈರಮುಡಿ, ಅರುವಿ ಟ್ರಸ್ಟ್ ಅಧ್ಯಕ್ಷೆ ಅರುಣ ಈಶ್ವರ್, ಸಾಹಿತಿ ಕೊತ್ತತ್ತಿ ರಾಜು, ಗಾಯಕರಾದ ಸಂತೆಕಸಲಗೆರೆ ಬಸವರಾಜ್, ಹನಿಯಂಬಾಡಿ ಶೇಖರ್, ಅರುಣ ಕೆಂಪರಾಜು ಹಾಜರಿದ್ದರು.