ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿ ಆಯೋಜಿಸೋಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Congratulatory ceremony for athletes Mandya
Published on

ಮಂಡ್ಯ: ಜಿಲ್ಲೆಯ ಎಲ್ಲರೂ ಸಹಕಾರದೊಂದಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ಮಂಡ್ಯ ಯಾವಾಗಲೂ ಮುಂದಿದೆ. ಅದರಲ್ಲಿಯೂ ಕಬಡ್ಡಿ ಕ್ರೀಡೆಯಲ್ಲಿ ಪ್ರಖ್ಯಾತಿ ಪಡೆದಿದೆ. ಇದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸೋಣ. ಇದಕ್ಕೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಿ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತೆಯೇ ಪಂದ್ಯಾವಳಿಯನ್ನು ಯಶಸ್ವಿಗೊಳಿಸೋಣ. ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದುಕೊಳ್ಳೋಣ ಎಂದರು.

ಶಾಸಕ ರವಿಕುಮಾರ್ ಗಣಿಗ, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಯೀಂ, ಅಸೋಸಿಯೇಷನ್‌ನ ಪ್ರಧಾನ ಪೋಷಕ ರವಿ ಭೋಜೇಗೌಡ, ಶಿವಲಿಂಗ ಪ್ರಸಾದ್, ಸಿ.ಪಿ.ನಾಗರಾಜು, ಶಿವಲಿಂಗಯ್ಯ, ವಿಜಯಕುಮಾರ್ ಇತರರಿದ್ದರು.

ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಬಹುಮಾನ ಹಾಗೂ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಬಹುಮಾನ ಪಡೆದವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ರವಿಕುಮಾರ್ ಗಣಿಗ ಅಭಿನಂದಿಸಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net