

ಮಂಡ್ಯ: ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವುದು ಪುಣ್ಯದ ಕಾರ್ಯ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಹರ್ಡೀಕರ್ ಭವನದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ನೆಲದನಿ ಅಲಯನ್ಸ್ ಸಂಸ್ಥೆ, ಮತ್ತು ಕೌಶಲ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಇಲಾಖೆಯಲ್ಲಿ ಸುಮಾರು 29 ಯೋಜನೆಗಳಿವೆ. ಆದರೆ ಸಮಗ್ರವಾಗಿ ಅನುಷ್ಠಾನ ಮಾಡದ ಪರಿಣಾಮ ಜಿಲ್ಲೆಯಿಂದ ಕೋಟ್ಯಂತರ ರೂ ಸರ್ಕಾರಕ್ಕೆ ವಾಪಸ್ ಹೋಗುತ್ತಿತ್ತು. ಮಂಡ್ಯ ಜಿಲ್ಲೆಯ ಪ್ರಗತಿ ರಾಜ್ಯದಲ್ಲಿ 21ನೇ ಸ್ಥಾನದಲ್ಲಿತ್ತು. ನಂತರ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರ, ಮಾರ್ಗದರ್ಶನದಲ್ಲಿ ಅರ್ಹರಿಗೆ ಯೋಜನೆ ತಲುಪಿಸಲಾಯಿತು. ಆಗ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಗೆ 2ನೇ ಸ್ಥಾನದಲ್ಲಿದೆ ಎಂದರು.
ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮಾತನಾಡಿ, 18ನೇ ವಯಸ್ಸಿನಿಂದ ರಕ್ತದಾನ ಮಾಡ ಮಾಡಿಕೊಂಡು ಬರುತ್ತಿದ್ದೇನೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಅಗತ್ಯಯುಳ್ಳವರಿಗೆ ತಡರಾತ್ರಿಯೂ ರಕ್ತದಾನ ಮಾಡಿದ ನಿದರ್ಶನಗಳಿವೆ ಎಂದರು.
ಅಲಯನ್ಸ್ ಸಂಸ್ಥೆ ಪ್ರಾಂತಪಾಲ ಮಾದೇಗೌಡ, ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು, ರಕ್ತನಿಧಿ ಕೇಂದ್ರದ ಮಹಮ್ಮದ್ ರಫಿ, ಕೌಶಲ ಅಲಯನ್ಸ್ ಸಂಸ್ಥೆಯ ರಕ್ಷಿತ್‌ರಾಜ್, ನೆಲದನಿ ಅಲಯನ್ಸ್ ಅಧ್ಯಕ್ಷೆ ಮಹಾಲಕ್ಷ್ಮೀ, ಚಂದ್ರಶೇಖರ್, ಶಶಿಧರ್ ಈಚಗೆರೆ, ಜಾಗೃತ ಕರ್ನಾಟಕ ಸಂಘಟನೆಯ ಸುಬ್ರಮಣ್ಯಂ ಇತರರಿದ್ದರು. ಇದೇ ವೇಳೆ 75 ಬಾರಿ ರಕ್ತದಾನ ಮಾಡಿದ ಎಂ.ಸಿ.ಲಂಕೇಶ್ ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು.