

ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ನವೀಕರಣ, ಜೀರ್ಣೋದ್ಧಾರ ಸಹಿತ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ನಡೆಯಲು ಉದಾರ ದಾನಗಳಿಂದ ನೆರವಾದ ಮತ್ತು ಅದಕ್ಕೆ ಕಾರಣಕರ್ತರಾದವರನ್ನು ಗೋಪಾಲಕೃಷ್ಣ ಕ್ಷೇತ್ರದ ಜಾತ್ರಾ ಮಹೋತ್ಸವದ ನಡುದೀಪೋತ್ಸವ ಮತ್ತು ವಿಶ್ವರೂಪದರ್ಶನ ದಿನವಾದ ಗುರುವಾರ ನಡೆದ ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ, ಗಳಿಸಿದ ದುಡ್ಡಿನ ಆಧಾರದಲ್ಲಿ ವ್ಯಕ್ತಿ ಶ್ರೀಮಂತ ಎನಿಸುವುದಿಲ್ಲ. ಗಳಿಸಿದ ಸಂಪತ್ತನ್ನು ಸಮಾಜದ ಅಶಕ್ತರಿಗೆ ಹೇಗೆ ದಾನ ಮಾಡಿ ಲೋಕಕಲ್ಯಾಣಕ್ಕೆ ವಿನಿಯೋಗಿಸುತ್ತಾನೆ ಎಂಬುದರಲ್ಲಿ ಶ್ರೀಮಂತಿಕೆ ಅಡಕವಾಗಿದೆ ಎಂದರು.
ಕಣಿಪುರ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶಕ್ಕೆ ಮಹಾದಾನ ಮಾಡಿದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸಮಿತಿಯ ಪ್ರಮುಖರಾದ ಸಾಮಾಜಿಕ ಮುಂದಾಳು ಮಂಜುನಾಥ ಆಳ್ವ ಮಡ್ವ, ಕೊಡುಗೈದಾನಿ ಬಿ.ಕೆ.ಮಧೂರು ಹಾಗೂ ಬ್ರಹ್ಮಕಲಶೋತ್ಸವದ ಮುಂಬೈ ಸಮಿತಿ ಸಂಚಾಲಕ ಮೋಹನ ಶೆಟ್ಟಿ ಕುಂಡಾವು ಅವರನ್ನು ಸನ್ಮಾನಿಸಲಾಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರದ ದೇಲಂಪಾಡಿ ಗಣೇಶ ತಂತ್ರಿ ಮಾತನಾಡಿದರು. ಉದ್ಯಮಿ, ದಾನಿ ಕೆ.ಕೆ.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕೆ.ಎಂ., ದೇವಳದ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ, ಸಮಿತಿ ಪದಾಧಿಕಾರಿಗಳಾದ ಕೆ.ಸಿ.ಮೋಹನ್, ಲಕ್ಷ್ಮಣ ಪ್ರಭು, ಕೆ.ಸುಧಾಕರ ಕಾಮತ್ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿಅಡಿಗ ಸನ್ಮಾನ ಪತ್ರ ವಾಚಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶಂಕರ ಆಳ್ವ ಕೋಟೆಕಾರು ಸ್ವಾಗತಿಸಿದರು. ಶಂನಾಡಿಗ ಕುಂಬಳೆ ನಿರೂಪಿಸಿದರು.