

ಮಂಡ್ಯ: ರಾಜ್ಯದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರಲು ಹೋರಾಟ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸಿಕೊಳ್ಳುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಅವರನ್ನು ವಿವಿಧ ಸಂಘಟನೆಗಳು ಒತ್ತಾಯಿಸಿದವು.
ನಗರದ ಸರ್‌ಎಂವಿ ಪ್ರತಿಮೆ ಎದುರು ಅವರನ್ನು ಅಭಿನಂದಿಸಿದ ಸಂಘಟನೆಗಳ ಪದಾಧಿಕಾರಿಗಳು, ಕದಂಬ ಚಕ್ರವರ್ತಿ ಮಯೂರ ವರ್ಮ, ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಪುತ್ಥಳಿ ಸ್ಥಾಪಿಸಲು ಹೋರಾಟಕ್ಕೆ ತಾವು ಮುಂಚೂಣಿಯಲ್ಲಿ ಇರಬೇಕು. ಇದಕ್ಕೆ ಕನ್ನಡ ಪರ ಸಂಘಟನೆಗಳು ಕೈ ಜೋಡಿಸಲು ಸಿದ್ಧರಿದ್ದೇವೆ. ವಿಧಾನ ಪರಿಷತ್ ಚುನಾವಣೆ ಬಳಿಕ ಚರ್ಚಿಸಿ ಹೋರಾಟ ರೂಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ವಾಟಾಳ್ ನಾಗರಾಜು ಸ್ಪಂದಿಸಿದರು.
ಕದಂಬ ಸೈನ್ಯ ಕನ್ನಡ ಸಂಘಟನೆ ಸಂಸ್ಥಾಪಕ ಬೇಕ್ರಿ ರಮೇಶ್, ದಲಿತ ಸಂಘರ್ಷ ಸಮಿತಿಯ(ಸ್ವಾಭಿಮಾನ ಕೃಷ್ಟಪ್ಪ ಬಣ)ದ ಮೈಸೂರು ವಿಭಾಗ ಸಂಚಾಲಕ ಬಸವರಾಜು ತಗ್ಗಹಳ್ಳಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಉಮ್ಮಡಹಳ್ಳಿ ಉಮೇಶ್, ನಿರಂಜನ್, ಉಮ್ಮಡಹಳ್ಳಿ ನಾಗೇಶ್, ಥಾಮಸ್ ಬೆಂಜಮಿನ್ ಕಿಟ್ಟಿ, ಭಗವಾನ್ ಇತರರಿದ್ದರು.